ವಿಸಾ ಸಿಗದ ಕಾರಣ ದಿಢೀರ್ ಎಂದು ನಿಕಾ ಮಾಡಿಕೊಂಡ ಜೋಡಿ
ಲಖನೌ : ಉತ್ತರ ಪ್ರದೇಶದ ಬಿಜೆಪಿ ಕಾರ್ಪೊರೇಟರ್ ಪುತ್ರ ಆನ್ಲೈನ್ನಲ್ಲಿ ಪಾಕಿಸ್ಥಾನದ ಯುವತಿಯನ್ನು ಮದುವೆಯಾಗಿದ್ದಾರೆ. ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯಲ್ಲಿ ವಿವಾಹ ನಡೆದಿದೆ. ಬಿಜೆಪಿ ಕಾರ್ಪೊರೇಟರ್ ತಹಸೀನ್ ಶಾಹಿದ್ ಹಿರಿಯ ಮಗ ಮೊಹಮ್ಮದ್ ಅಬ್ಬಾಸ್ ಹೈದರ್ ಮತ್ತು ಲಾಹೋರ್ ನಿವಾಸಿ ಆಂಡ್ಲೀಪ್ ಜಹ್ರಾ ಅವರ ವಿವಾಹವನ್ನು ಏರ್ಪಡಿಸಿದ್ದರು.
ಎರಡು ನೆರೆಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆಯಿಂದಾಗಿ ವೀಸಾಗೆ ಅರ್ಜಿ ಸಲ್ಲಿಸಿದರೂ ಪಡೆಯಲು ಸಾಧ್ಯವಾಗಿಲ್ಲ. ವಧುವಿನ ತಾಯಿ ರಾಣಾ ಯಾಸ್ಮಿನ್ ಜೈದಿ ಅವರು ಅನಾರೋಗ್ಯಕ್ಕೆ ಒಳಗಾಗಿ ಐಸಿಯುಗೆ ದಾಖಲಿಸಲಾಗಿತ್ತು, ಪರಿಸ್ಥಿತಿ ತೀರಾ ಹದಗೆಟ್ಟಿತ್ತು.
ಈ ಹಿನ್ನೆಲೆಯಲ್ಲಿ ಮದುವೆ ಸಮಾರಂಭವನ್ನು ಆನ್ಲೈನ್ನಲ್ಲಿ ನಡೆಸಲು ಶಾಹಿದ್ ನಿರ್ಧರಿಸಿದ್ದರು. ವಧುವಿನ ಕುಟುಂಬದವರು ಲಾಹೋರ್ನಿಂದ ಸಮಾರಂಭದಲ್ಲಿ ಭಾಗವಹಿಸಿದ್ದರು. ಶಿಯಾ ಧಾರ್ಮಿಕ ಮುಖಂಡ ಮೌಲಾನಾ ಮಹ್ಫೂಜುಲ್ ಹಸನ್ ಖಾನ್ ಅವರು ವಧು, ವರನ ಒಪ್ಪಿಗೆ ಪಡೆದು ನಿಕಾ ಮಾಡಿಸಿದರು.
ಹೈದರ್ ತನ್ನ ಹೆಂಡತಿಗೆ ಯಾವುದೇ ತೊಂದರೆಯಿಲ್ಲದೆ ಭಾರತೀಯ ವೀಸಾ ಸಿಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ಬಿಜೆಪಿ ಎಂಎಲ್ಸಿ ಬ್ರಿಜೇಶ್ ಸಿಂಗ್ ಪ್ರಿಶು ಮತ್ತು ಇತರ ಅತಿಥಿಗಳು ವಿವಾಹ ಸಮಾರಂಭದಲ್ಲಿ ಭಾಗವಹಿಸಿ ವಧು, ವರನ ಕುಟುಂಬವನ್ನು ಅಭಿನಂದಿಸಿದರು.