ಇ.ಡಿ. ಪರಿಶೀಲನೆ ವೇಳೆ ಭೂ ದಾಖಲೆಗಳು ನಾಪತ್ತೆಯಾಗಿರುವುದು ಬಯಲು
ಬೆಂಗಳೂರು: ಮುಡಾ ಸೈಟ್ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಅಚ್ಚರಿದಾಯಕ ಸುದ್ದಿ ಹೊರಬಿದ್ದಿದೆ. ಮೈಸೂರಿನ ಮುಡಾ ಕಚೇರಿಯಲ್ಲಿ ಇ.ಡಿ ಅಧಿಕಾರಿಗಳ ದಾಳಿ ವೇಳೆ 1992ರ ಪ್ರಮುಖ ದಾಖಲೆಯೇ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಬಹುಕೋಟಿ ಹಗರಣ ಪ್ರಕರಣದಲ್ಲಿ ಶುಕ್ರವಾರ ಮುಡಾ ಕಚೇರಿ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಕಾದು ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ಅಚ್ಚರಿಗೆ ಒಳಗಾಗಿದ್ದಾರೆ. ಡಿನೋಟಿಫೈ ಮಾಡಿ ನೋಟಿಫೈ ಮಾಡಲು ತೆಗೆದುಕೊಂಡ ನಿರ್ಧಾರದ ದಾಖಲೆಗಳೇ ನಾಪತ್ತೆಯಾಗಿವೆ. 1992ರ ಫೆಬ್ರವರಿ ತಿಂಗಳಿನ ಕೆಲ ದಾಖಲೆಗಳು ನಾಪತ್ತೆಯಾಗಿರುವುದ ಕಂಡುಬಂದಿದೆ. ಅದೇ ಸಂದರ್ಭದಲ್ಲಿ ಡಿನೋಟಿಫೈ ಆಗಿದ್ದ ಭೂಮಿಯ ಪರಭಾರೆಯಾಗಿತ್ತು.
ಮುಡಾದ ತೆಕ್ಕೆಯಲ್ಲಿದ್ದ ಜಮೀನು ಮತ್ತೆ ಕೃಷಿಭೂಮಿ ಎಂದು ಪರಿವರ್ತನೆ ಮಾಡಲು ತೆಗೆದುಕೊಂಡ ಕ್ರಮ, ತಹಶೀಲ್ದಾರ್ ಮತ್ತು ಆಗಿನ ಜಿಲ್ಲಾಧಿಕಾರಿಗಳು ಮಾಡಿದ ಶಿಫಾರಸ್ಸಿನ ಪತ್ರಗಳು, ಈ ದಾಖಲೆಯ ಪ್ರಮುಖ ಶಿಫಾರಸಿನ ಪತ್ರಗಳು, ಕೃಷಿಭೂಮಿ ಮಾಡಲು ತೆಗೆದುಕೊಂಡ ತೀರ್ಮಾನ ನಡಾವಳಿಯ ಪತ್ರಗಳು ನಾಪತ್ತೆಯಾಗಿವೆ.
ಈ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆಯಲು ಇಡಿ ಸಂಪೂರ್ಣ ಪ್ರಯತ್ನ ಮಾಡುತ್ತಿದೆ. 16 ಗಂಟೆಗಳ ನಿರಂತರ ದಾಳಿಯಲ್ಲಿ ಪ್ರಮುಖ ದಾಖಲೆಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.