ಪುತ್ತೂರು: ಆಟೋ ರಿಕ್ಷಾವೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋಸಾಗಟ ಮಾಡುತ್ತಿದ್ದ ಆರೋಪದ ಮೇಲೆ ರಿಕ್ಷಾ ಚಾಲಕ ಹಾಗೂ ರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
ಪುತ್ತೂರಿನ ದರ್ಬೆ ಬೈಪಾಸ್ ರಸ್ತೆಯಲ್ಲಿ ಅ.16 ರಂದು ಈ ಘಟನೆ ನಡೆದಿದ್ದು, ಬಜರಂಗದಳದ ಕಾರ್ಯಕರ್ತರು ಗೋ ಸಾಗಿಸುತ್ತಿದ್ದ ವಾಹನವನ್ನು ತಡೆದು, ಪೊಲೀಸರಿಗೆ ಒಪ್ಪಿಸಿದ್ದರು.
ಬನ್ನೂರು ನಿವಾಸಿಗಳಾದ ಆಟೋ ರಿಕ್ಷಾ ಚಾಲಕ ಇಬ್ರಾಹಿಂ, ಆಟೋದಲ್ಲಿದ್ದ ರೆಹಮತ್, ಸಫಿಯಾ ಬಂಧಿತ ಆರೋಪಿಗಳಾಗಿದ್ದು, ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಇದೀಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆಟೋ ರಿಕ್ಷಾದಲ್ಲಿ ಗೋಸಾಗಟದ ಕುರಿತು ಮಾಹಿತಿ ತಿಳಿದು ಬಜರಂಗದಳದ ಕಾರ್ಯಕರ್ತರು ದರ್ಬೆ ಬೈಪಾಸ್ ರಸ್ತೆ ಸರ್ವಿಸ್‌ಸ್ಟೇಷನ್ ಬಳಿ ಆಟೋ ರಿಕ್ಷಾವನ್ನು ನಿಲ್ಲಿಸಿ ಪರಿಶೀಲಿಸಿದ್ದಾರೆ. ಆಗ ಮಹಿಳೆಯರಿಬ್ಬರು ಕುಳಿತಿದ್ದ ಕಾಲಿನಡಿ ಗೋವು ಪತ್ತೆಯಾಗಿದೆ. ತಕ್ಷಣ ಬಜರಂಗದಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೇ ಮಹಿಳೆಯರಿಬ್ಬರನ್ನು ರಿಕ್ಷಾದಿಂದ ಇಳಿಸಿ ಗೋವಿನ ರಕ್ಷಣೆಗೆ ಮುಂದಾಗಿದ್ದರು. ಗೋವನ್ನು ಠಾಣೆಯ ಬಳಿ ಕಟ್ಟಿ ಹಾಕಲಾಗಿದೆ. ರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.