ಆಡಿಯೋದಲ್ಲಿದೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಡೆದ ವ್ಯವಹಾರದ ಮಾತು
ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಾಸನದಲ್ಲಿ ಕೋಟಿ ಕೋಟಿ ರೂ. ಹಂಚಿಕೆ ಮಾಡಿದ್ದಾರೆ ಎಂದು ಹೇಳುತ್ತಿರುವ ಅರಸೀಕೆರೆ ಶಾಸಕ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋ ತುಣುಕೊಂದು ವೈರಲ್ ಆಗಿದೆ. ಚುನಾವಣೆ ನಡೆದು ನಾಲ್ಕು ತಿಂಗಳ ಬಳಿಕ ಆಡಿಯೋ ಬಹಿರಂಗವಾಗಿದೆ.
ಶಿವಲಿಂಗೇಗೌಡರದ್ದು ಎನ್ನಲಾಗುತ್ತಿರುವ ಆಡಿಯೋದಲ್ಲಿ, ಸಿಎಂ, ಡಿಸಿಎಂ ಸೂಚನೆಯಂತೆ ಹಣ ಹಂಚಬೇಕು ಎಂದು ಹೇಳಲಾಗಿದೆ. ಒಟ್ಟು ಏಳು ಕೋಟಿ ಹಣ ಹಂಚಿಕೆಯ ಬಗ್ಗೆ ಮಾತನಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಐದು ಕೋಟಿ ಕೊಡುತ್ತಾರೆ. ಮಾಜಿ ಎಂಎಲ್ಸಿ ಗೋಪಾಲಸ್ವಾಮಿ ಒಂದು ಕೋಟಿ, ನಾನು ಒಂದು ಕೋಟಿ ಕೊಡುತ್ತೇನೆ. ಒಟ್ಟು ಏಳು ಕೋಟಿ ಹಂಚಿಕೆ ಆಗಬೇಕು ಎಂದು ಮಾತನಾಡಿರುವುದು ಆಡಿಯೋದಲ್ಲಿದೆ. ಶಿವಲಿಂಗೇಗೌಡ ತಮ್ಮ ಪಕ್ಷದ ಮುಖಂಡರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದು ಎನ್ನಲಾಗುತ್ತಿದೆ.
ಪ್ರತಿ ಓಟಿಗೆ ಐದು ನೂರು ರೂಪಾಯಿ ಕೊಡಬೇಕು. ಒಟ್ಟು ಶೇಕಡಾ 68 ರಿಂದ 70 ಜನರಿಗೆ ಹಣ ಕೊಡಿ. ಯಾರು ನಮಗೆ ಓಟ್ ಹಾಕುತ್ತಾರೆ ಎಂಬುದು ಗೊತ್ತಿರುತ್ತೆ, ಅವರಿಗೆ ಕೊಡಿ. ಯಾರು 30 ಪರ್ಸೆಂಟ್ ಮತ ತಗೋತಾರೆ ಅವರಿಗೆ ಕೊಡೋದು ಬೇಡ. ಸಿಎಂ, ಡಿಸಿಎಂ, ಉಸ್ತುವಾರಿ ಅವರೇ ತೀರ್ಮಾನ ಮಾಡಿದ್ದಾರೆ, ಅದರಂತೆ ಹಂಚಲಿ. ಶಿವರಾಂ ಅವರು ಮನೆಗೊಂದು ಸಾವಿರ ಕೊಡುತ್ತಾ ಇದ್ದಾರಂತೆ. ಅವರ ಶಿಷ್ಯನೇ ಹೇಳಿದ್ದಾರೆ, ಅವರು ಐದು ನೂರು ರೂಪಾಯಿ ಕೊಟ್ಟಿದಾರೆ ಎಂಬುದಾಗಿ. ನಾವೂ ಒಂದು ಓಟ್ಗೆ 500 ರೂ. ಕೊಡಬೇಕು ಎಂದಿರುವುದು ಆಡಿಯೋದಲ್ಲಿದೆ.
ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಚಿವ ಬಿ ಶಿವರಾಂ ಅವರ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವುದು ಆಡಿಯೋದಲ್ಲಿದೆ. ತೀರ್ಮಾನ ಆಗಿರುವುದು ಐದು ನೂರು ರೂ. ಹಂಚಬೇಕು ಎಂದು. ಅಷ್ಟು ಹಂಚದಿದ್ದರೆ ಚೆನ್ನಾಗಿರಲ್ಲ ಎಂದು ಮಾತನಾಡಿರುವುದು ಆಡಿಯೋದಲ್ಲಿದೆ.
ಪೆನ್ ಡ್ರೈವ್ ಪ್ರಕರಣ ಹಾಗೂ ಅಶ್ಲೀಲ ವೀಡಿಯೋ ಬಗ್ಗೆಯೂ ಮಾತು ಸಾಗಿದೆ. ಇಂತಹ ಸಮಯ ಸದುಪಯೋಗ ಮಾಡಿಕೊಳ್ಳಬೇಕು. ವೀಡಿಯೋ ಲೀಕ್ ಆದ ನಂತರ ಕುಮಾರಸ್ವಾಮಿ ಅವರೇ ಪ್ರಚಾರಕ್ಕೆ ಬರಲಿಲ್ಲ. ದೇವೇಗೌಡರು ಅಂತಹ ವಯಸ್ಸಲ್ಲಿ ಬಂದು ಪ್ರಚಾರ ಮಾಡಬೇಕಾ? ಬೇರೆ ಯಾರೂ ಇರಲಿಲ್ಲವೇ? ಬಿಜೆಪಿ ನಾಯಕರು ಕೆಲಸ ಮಾಡುತ್ತಾ ಇಲ್ಲ ಎಂದಿರುವುದು ಆಡಿಯೋದಲ್ಲಿದೆ.
ಬೇಲೂರು ಶಾಸಕ ಸುರೇಶ್ ಕೆಲಸ ಮಾಡುತ್ತಾ ಇಲ್ಲ. ಬೇಲೂರಿನಲ್ಲಿ ಶಿವರಾಂ ಸರಿಯಾಗಿ ಪ್ರಚಾರ ಮಾಡುತ್ತಾ ಇಲ್ಲ. ಶಿವರಾಂ ಬಂದ ನಂತರ ರೌಡಿಗಳು ಚಿಗುರಿಕೊಂಡಿದ್ದಾರೆ. ಹಿಂದೆ ಬೇಲೂರಿನಲ್ಲಿ ರುದ್ರೇಶ್ ಗೌಡ ಇದ್ದಾಗ ಅವರನ್ನ ದೂರ ಇಟ್ಟಿದ್ದರು. ರೌಡಿಗಳನ್ನ ಜೊತೆಯಲ್ಲಿ ಇಟ್ಟುಕೊಂಡು ರಾಜಕೀಯ ಮಾಡುತ್ತಾರೆ. ಹೀಗಾದ್ರೆ ಯಾರು ಓಟ್ ಹಾಕುತ್ತಾರೆ ಎಂದು ಶಿವಲಿಂಗೇಗೌಡ ಮಾತನಾಡಿದ್ದಾರೆ ಎನ್ನಲಾಗಿದೆ. ಬೇಲೂರು ಭಾಗದ ಮುಖಂಡರ ಜೊತೆ ಶಿವಲಿಂಗೇಗೌಡ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದಾಗಿದೆ.