ಬಿಜೆಪಿ, ಕಾಂಗ್ರೆಸ್ ಪಾಲಿಗೆ ಮಾಡು ಇಲ್ಲವೆ ಮಡಿ ಹೋರಾಟದ ಕಣ
ಹೊಸದಿಲ್ಲಿ: ಹರ್ಯಾಣ ಮತ್ತು ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಮುಗಿದ ಬೆನ್ನಿಗೆ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆ ಎದುರಾಗಿದ್ದು, ಇದರ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಇಂದು ಮಧ್ಯಾಹ್ನ 3.30ಕ್ಕೆ ಪ್ರಕಟಿಸಲಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26ಕ್ಕೆ ಕೊನೆಗೊಳ್ಳಲಿದ್ದು, 81 ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್ ವಿಧಾನಸಭೆಯು 2025ರ ಜನವರಿ 5ರಂದು ತನ್ನ ಅವಧಿಯನ್ನು ಪೂರ್ಣಗೊಳಿಸಲಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನಾ ಮತ್ತು ಎನ್‌ಸಿಪಿ ಆಡಳಿತಾರೂಢ ಮಹಾಯುತಿ ಒಕ್ಕೂಟವು ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ ವಿರುದ್ಧ ಸ್ಪರ್ಧಿಸಲಿದೆ.
ಜಾರ್ಖಂಡ್‌ನಲ್ಲಿ ಇಂಡಿ ಮೈತ್ರಿಕೂಟದ ಭಾಗವಾಗಿರುವ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಆಲ್ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟ (ಎಜೆಎಸ್‌ಯು), ಜನತಾ ದಳ (ಯುನೈಟೆಡ್) ಮತ್ತು ಬಿಜೆಪಿಯನ್ನು ಒಳಗೊಂಡಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ವಿರುದ್ಧ ಸ್ಪರ್ಧಿಸಲಿದೆ.
ಲೋಕಸಭೆ ಚುನಾವಣೆಯಲ್ಲಿ ನಿರೀಸಿದಷ್ಟು ಸ್ಥಾನ ಗಳಿಸಲು ಸಾಧ್ಯವಾಗದೆ ನಿರಾಶೆ ಅನುಭವಿಸಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೋಟ ಹರ್ಯಾಣದಲ್ಲಿ ಸಿಕ್ಕಿದ ಅನಿರೀಕ್ಷಿತ ಗೆಲುವಿನಿಂದಾಗಿ ರಣೋತ್ಸಾಹದಲ್ಲಿದೆ. ಇದೇ ವೇಳೆ ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದರೂ ಅದರ ಬೆನ್ನಿಗೆ ನಡೆದ ಹರ್ಯಾಣ ಮತ್ತು ಜಮ್ಮು-ಕಾಶ್ಮೀರ ಚುನಾವಣೆಯಲ್ಲಿ ತನ್ನ ಕಳಪೆ ನಿರ್ವಹಣೆಯ ದಾಖಲೆಯನ್ನು ಮುಂದುವರಿಸಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ಬಿಜೆಪಿ ಪಾಲಿಗೆ ಬಹಳ ಮಹತ್ವದ ಚುನಾವಣೆಯಾಗಿದೆ. ಈ ಎರಡು ರಾಜ್ಯಗಳನ್ನು ಗೆದ್ದುಕೊಂಡರೆ ಲೋಕಸಭೆ ಚುನಾವಣೆಯಲ್ಲಾದ ಹಿನ್ನಡೆ ತಾತ್ಕಾಲಿಕ ಎಂಬ ಭರವಸೆ ಪಕ್ಷಕ್ಕೆ ತುಂಬಲಿದೆ. ಇದೇ ವೇಳೆ ಕಾಂಗ್ರೆಸ್ ನೇತೃತ್ವದ ಇಂಡಿ ಪಾಲಿಗೆ ಈ ಎರಡು ರಾಜ್ಯಗಳಲ್ಲಿ ಗಮನಾರ್ಹ ಸಾಧನೆ ಮಾಡಿದರಷ್ಟೇ ಭವಿಷ್ಯ ಭದ್ರವಾಗಬಹುದು.
ಬಿಜೆಪಿ ತನ್ನ ಕೇಂದ್ರ ಚುನಾವಣಾ ಸಮಿತಿಯಿಂದ ಅನುಮತಿ ಪಡೆದ ನಂತರ ಮುಂದಿನ ಎರಡು ದಿನಗಳಲ್ಲಿ 60ಕ್ಕೂ ಹೆಚ್ಚು ಹೆಸರುಗಳೊಂದಿಗೆ ಮಹಾರಾಷ್ಟ್ರ ಚುನಾವಣೆಗೆ ತನ್ನ ಮೊದಲ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ದಿಲ್ಲಿಯಲ್ಲಿ ಪಕ್ಷದ ಮಹಾರಾಷ್ಟ್ರ ಘಟಕದ ಪ್ರಮುಖ ನಾಯಕರು ಮತ್ತು ಎರಡು ರಾಜ್ಯ ಚುನಾವಣಾ ಉಸ್ತುವಾರಿಗಳಾದ ಭೂಪೇಂದರ್ ಯಾದವ್ ಮತ್ತು ಅಶ್ವಿನಿ ವೈಷ್ಣವ್ ಅವರೊಂದಿಗೆ ಸುದೀರ್ಘ ಸಭೆ ನಡೆಸಿದ್ದಾರೆ. ಮಹಾರಾಷ್ಟ್ರ ಘಟಕ ಹಾಲಿ ಶಾಸಕರು ಸೇರಿದಂತೆ ಸುಮಾರು 100 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
ಕಾಂಗ್ರೆಸ್ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಸಭೆಯನ್ನು ಕರೆದಿದೆ. ಮಹಾ ವಿಕಾಸ್ ಅಘಾಡಿಯ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆಯಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ದಿಲ್ಲಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಾಟೋಲೆ, ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ ವಾದೆತ್ತಿವಾರ್ ಮತ್ತು ಹಿರಿಯ ನಾಯಕ ಬಾಳಾಸಾಹೇಬ್ ಥೋರಟ್ ಭಾಗವಹಿಸಿದ್ದಾರೆ.