ಅವೈಜ್ಞಾನಿಕ ಕಾಮಗಾರಿ, ವಾಹನ ದಟ್ಟಣೆಯಿಂದ ಆಗಾಗ ಭೂ ಕುಸಿತ
ಚಿಕ್ಕಮಗಳೂರು : ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತ ಸಾಲು, ಚಾರ್ಮಾಡಿ ಘಾಟಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಬೆಟ್ಟ ಪ್ರದೇಶಗಳು ಅಪಾಯವನ್ನು ಎದುರಿಸುತ್ತಿವೆ ಎಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ವರದಿ ತಿಳಿಸಿದೆ. ಈ ಮಳೆಗಾಲದಲ್ಲಿ ಚಾರ್ಮಾಡಿ ಘಾಟಿಯಲ್ಲಿ ಪದೇಪದೆ ಭೂಕುಸಿತ ಸಂಭವಿಸಿ ಮಂಗಳೂರು-ಬೆಂಗಳೂರು ನಡುವಿನ ಸಂಚಾರಕ್ಕೆ ಆಗಾಗ ತೊಡಕುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಪಶ್ಚಿಮ ಘಟ್ಟದ ಅಧ್ಯಯನ ನಡೆಸಿ ವರದಿ ನೀಡಿದೆ.
ಪರಿಸರ ಸೂಕ್ಷ್ಮ ಪ್ರದೇಶಗಳ ಬಗ್ಗೆ ಜಿಯೋಲಾಜಿಕಲ್ ಸರ್ವೆ ತಂಡ ಸಮೀಕ್ಷೆ ನಡೆಸಿದೆ. ವರದಿಯನ್ನು ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದ್ದು, ಇದರಲ್ಲಿ ಅನೇಕ ಆಘಾತಕಾರಿ ಅಂಶಗಳು ಇದೆ ಎನ್ನಲಾಗಿದೆ. ಅವೈಜ್ಞಾನಿಕ ಕಾಮಗಾರಿ, ವಾಹನಗಳ ಅತಿಯಾದ ದಟ್ಟಣೆ, ಅತಿಹೆಚ್ಚು ಮಳೆಯಿಂದ ಭೂ ಕುಸಿತಗಳು ಸಂಭವಿಸುತ್ತಿವೆ. ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತದ ಸಾಲು, ಚಾರ್ಮಾಡಿ ಘಾಟಿ ಬಹಳ ಅಪಾಯಕಾರಿ ಪ್ರದೇಶಗಳಾಗಿ ಪರಿಣಮಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತದ ಸಾಲುಗಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವಂತೆ ವರದಿಯಲ್ಲಿ ಸಲಹೆ ನೀಡಲಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಪಶ್ಚಿಮ ಘಟ್ಟಗಳ ಸಾಲು, ಮಲೆನಾಡು ಭಾಗದಲ್ಲಿ ಭೂ ಕುಸಿತದ ಭೀತಿ ಉಂಟಾಗಿದೆ ಎಂದು ವರದಿ ತಿಳಿಸಿದೆ. ಅವೈಜ್ಞಾನಿಕ ಕಾಮಗಾರಿಗಳಿಂದ ಗುಡ್ಡ, ಭೂ ಕುಸಿತ ಸಂಭವಿಸುತ್ತಿದೆ. ವೈಜ್ಞಾನಿಕ ರೀತಿಯಲ್ಲಿ ರಸ್ತೆ ಕಾಮಗಾರಿ ಮಾಡದೆ ಅವಾಂತರ ಸೃಷ್ಟಿಯಾಗಿದೆ ಎಂದು ವರದಿ ಹೇಳಿದೆ. ಅತಿಹೆಚ್ಚು ಕಾಮಗಾರಿಗಳಿಂದ ಪಶ್ಚಿಮ ಘಟ್ಟಗಳ ಸಾಲಿಗೆ ಹಾನಿಯಾಗುತ್ತಿದೆ ಎಂದು ಹೇಳಿದೆ.