ಇಂದು ಆಕರ್ಷಕ ಜಂಬೂ ಸವಾರಿ

ಒಂದು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದ ಬಂಬೂ ಸವಾರಿ ಇಂದು ನಡೆಯಲಿದೆ. ನವರಾತ್ರಿಯ 9 ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳು ಜನಮನ ಸೂರೆಗೊಂಡಿದ್ದು, ೧೦ನೇ ದಿನವಾದ ಶನಿವಾರ ವಿಜಯ ದಶಮಿ ಜಂಬೂಸವಾರಿ ನಡೆಯಲಿದೆ. ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಅಭಿಮನ್ಯು ಸಾಗಲಿದ್ದು, ಮೈಸೂರು ಜಂಬೂಸವಾರಿಗೆ ಸಿಂಗರಿಸಿಕೊಂಡು ಸಜ್ಜಾಗಿದೆ. ದೇಶ ವಿದೇಶಗಳಿಂದ ಉತ್ಸವ ವೀಕ್ಷಿಸಲು ಜನರು ಬಂದಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ.

ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಅದ್ದೂರಿ ದಸರಾ ಆಚರಿಸಲಾಗಿದೆ. ಮೈಸೂರು ಜಿಲ್ಲಾಡಳಿತ ಜಂಬೂಸವಾರಿಗೆ ಸಕಲ ಸಿದ್ಧತೆ ಕೈಗೊಂಡಿದೆ. ಅರಮನೆ ಮುಂಭಾಗ 30 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಇಂದು ಮಧ್ಯಾಹ್ನ 1.41ರಿಂದ 2.10 ಗಂಟೆಯೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಚಾಮುಂಡೇಶ್ವರಿ ವಿಗ್ರಹ ಹೊತ್ತ ಚಿನ್ನದ ಅಂಬಾರಿಗೆ ಸಂಜೆ 4 ರಿಂದ 4.30ರ ಕುಂಭ ಲಗ್ನದಲ್ಲಿ ಪುಷ್ಪಾರ್ಚನೆ ನೆರವೇರಿಸುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ.

































 
 

ಜಂಬೂ ಸವಾರಿ ನಡೆಯುವ ದಿನ ಭದ್ರತೆ ದೃಷ್ಟಿಯಿಂದ 5 ಸಾವಿರಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಂಜೆ 7 ಗಂಟೆಗೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯುವ ಮೂಲಕ ದಸರಾ ಸಂಭ್ರಮಕ್ಕೆ ತೆರೆಬೀಳಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪಂಜಿನ ಕವಾಯತು ವೀಕ್ಷಣೆ ಮಾಡಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಡ್ರೋಣ್ ಶೋ ಹಾಗೂ ಬೈಕ್ ಸ್ಟಂಟ್‌ ನಡೆಯಲಿದ್ದು, ಸಾವಿರಾರು ಮಂದಿ ಕಣ್ತುಂಬಿಕೊಳ್ಳಲಿದ್ದಾರೆ.

750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಗಜಪಡೆ ನಾಯಕ ಅಭಿಮನ್ಯು ಐದನೇ ಬಾರಿ ಜಂಬೂಸವಾರಿಯಲ್ಲಿ ಹೆಜ್ಜೆ ಹಾಕಲಿದ್ದಾನೆ. ಹಿರಣ್ಯ ಮತ್ತು ಲಕ್ಷ್ಮಿ ಕುಮ್ಕಿ ಆನೆಗಳಾಗಿ ಹೆಜ್ಜೆ ಹಾಕಲಿವೆ. ನಿಶಾನೆ ಆನೆಯಾಗಿ ಧನಂಜಯ್, ನೌಥ್ ಆನೆಯಾಗಿ ಗೋಪಿ ಭಾಗವಹಿಸಲಿವೆ.
ವಿಜಯದಶಮಿ ಪ್ರಯುಕ್ತ ಅರಮನೆಯಲ್ಲಿ ಜಟ್ಟಿಗಳ ರೋಚಕ ವಜ್ರಮುಷ್ಠಿ ಕಾಳಗ ನಡೆಯುತ್ತದೆ. ಅರಮನೆಯ ಸವಾರಿ ತೊಟ್ಟಿಯ ಮಣ್ಣಿನ ಅಖಾಡದಲ್ಲಿ ವಿಜಯಯಾತ್ರೆಗೂ ಮುನ್ನ ರಾಜವಂಶಸ್ಥ ಯದುವೀರ್ ಅವರು ಪಟ್ಟದ ಕತ್ತಿಗೆ ಪೂಜೆ ಸಲ್ಲಿಸುತ್ತಿದ್ದಂತೆ ಜಟ್ಟಿಗಳ ಕಾಳಗ ಆರಂಭವಾಗುತ್ತದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top