ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮತ್ತೆ ರಿಯಾಯಿತಿ ದರದ ಅಕ್ಕಿ ಕೊಡಲು ಚಿಂತನೆ
ಹೊಸದಿಲ್ಲಿ: ಆಹಾರ ಧಾನ್ಯಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ್ ಬ್ರಾಂಡ್ ಅಕ್ಕಿ ಮತ್ತು ಬೇಳೆಕಾಳುಗಳನ್ನು ಮತ್ತೆ ಮಾರುಕಟ್ಟೆಗೆ ಬಿಡಲು ಕೇಂದ್ರ ಸರಕಾರ ಮತ್ತೆ ಚಿಂತನೆ ನಡೆಸಿದೆ. ಹಣದುಬ್ಬರದ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಅಕ್ಕಿ, ಬೇಳೆಕಾಳುಗಳು, ಅಡುಗೆ ಎಣ್ಣೆ ಸಹಿತ ಅಗತ್ಯ ವಸ್ತುಗಳು ಬೆಲೆ ಏರಿಕೆಯಾಗುತ್ತಿದೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಇದರಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ನಿಯಂತ್ರಿಸಲು ಕೇಂದ್ರ ಮುಂದಾಗಿದೆ.
ಕಳೆದ ಚುನಾವಣೆಗೆ ಮೊದಲು ಅಕ್ಕಿ, ಬೇಳೆ ಬೆಲೆ ಏರಿಕೆ ತಡೆಯಲು ಕೇಂದ್ರ ಸರ್ಕಾರ ಭಾರತ್ ಬ್ರಾಂಡ್‌ನ ಅಕ್ಕಿ, ಬೇಳೆಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇದರ ಬೆಲೆ ಮುಕ್ತ ಮಾರುಕಟ್ಟೆಯ ಅಕ್ಕಿ ಬೇಳೆಗಳ ಬೆಲೆಗಿಂತ ಬಹಳ ಕಡಿಮೆ ಇದ್ದ ಕಾರಣ ಬಹಳ ಜನಪ್ರಿಯವಾಗಿತ್ತು. ಮಾರುಕಟ್ಟೆಯಲ್ಲಿ ಅಕ್ಕಿಗೆ ಕೆಜಿಗೆ 50-55 ರೂ. ಇರುವಾಗ ಭಾರತ್ ಬ್ರಾಂಡ್ ಅಕ್ಕಿ 26 ರೂ.ಗೆ ಸಿಗುತ್ತಿದ್ದ ಕಾರಣ ಜನರು ಮುಗಿಬಿದ್ದು ಖರೀದಿಸುತ್ತಿದ್ದರು. ಆದರೆ ಲೋಕಸಭೆ ಚುನಾವಣೆ ಮುಗಿದ ಬಳಿಕ ಭಾರತ್ ಬ್ರಾಂಡ್ ಅಕ್ಕಿ ಮಾರುಕಟ್ಟೆಯಿಂದ ನಾಪತ್ತೆಯಾಗಿತ್ತು. ಇದು ಚುನಾವಣೆ ಗೆಲ್ಲಲು ಬಿಜೆಪಿ ಮಾಡಿದ ಗಿಮಿಕ್ ಎಂದು ಟೀಕೆಗೊಳಗಾಗಿತ್ತು.
ಈಗ ಮತ್ತೆ ಭಾರತ್ ಬ್ರಾಂಡ್‌ನ ಅಕ್ಕಿ ಬೇಳೆಗಳನ್ನು ರೀಲಾಂಚ್ ಮಾಡಲು ಕೇಂದ್ರ ಸರ್ಕಾರ ಆಲೋಚಿಸಿದ್ದು, ದರ ಪರಿಷ್ಕರಣೆ ವಿಚಾರ ಚರ್ಚೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಹಬ್ಬ-ಹರಿದಿನಗಳಲ್ಲಿ ಬಡ ಮತ್ತು ಕೆಳ ಮಧ್ಯಮ ವರ್ಗದ ಜನರಿಗೆ ಆಗುವ ಕಷ್ಟ ತಪ್ಪಿಸಲು ಮೋದಿ ಸರ್ಕಾರ ಇದೇ ತಿಂಗಳು ಅಥವಾ ಮುಂದಿನ ತಿಂಗಳ ಆರಂಭದ ಒಳಗೆ ಭಾರತ್ ಬ್ರಾಂಡ್ ಅಕ್ಕಿ ಬೇಳೆಯನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.