ಒಂದೇ ವಾರದಲ್ಲಿ 7,620 ಕೋ.ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡ ಪೊಲೀಸರು
ಹೊಸದಿಲ್ಲಿ: ದಿಲ್ಲಿ ಪೊಲೀಸರು ಮತ್ತೊಂದು ದೊಡ್ಡ ಡ್ರಗ್ಸ್ ಬೇಟೆಯಾಡಿದ್ದಾರೆ. ಕುರುಕು ತಿಂಡಿಗಳ ಪೊಟ್ಟಣಗಲ್ಲಿ ತುಂಬಿಸಿಟ್ಟಿದ್ದ 2,000 ಕೋ. ರೂ. ಮೌಲ್ಯದ 200 ಕೆಜಿ ಕೊಕೈನ್ ವಶವಾಗಿದೆ. ಅ.2ರಂದು ದಿಲ್ಲಿಯಲ್ಲಿ 5,620 ಕೋ. ರೂ. ಮೌಲ್ಯದ 600 ಕೆಜಿ ಡ್ರಗ್ಸ್ ವಶವಾಗಿತ್ತು. ಅನಂತರ ಸಿಕ್ಕಿದ ಅತಿದೊಡ್ಡ ಪ್ರಮಾಣದ ಮಾದಕ ವಸ್ತುವಿದು.
ದಿಲ್ಲಿಯ ರಮೇಶ್ ನಗರದ ಗೋದಾಮೊಂದರಲ್ಲಿ ಕುರುಕು ತಿಂಡಿಗಳ ಪೊಟ್ಟಣಗಳಲ್ಲಿ ತುಂಬಿಸಿ ಕೊಕೈನ್ ಅಡಗಿಸಿಡಲಾಗಿತ್ತು. ಮಾದಕವಸ್ತು ಸಾಗಿಸಲು ಬಳಸುತ್ತಿದ್ದ ಕಾರಲ್ಲಿ ಜಿಪಿಎಸ್ ವ್ಯವಸ್ಥೆ ಇತ್ತು. ಈ ಜಿಪಿಎಸ್ ಟ್ರ್ಯಾಕ್ ಮಾಡಿ ಪೊಲೀಸರು ಗೋದಾಮು ಪತ್ತೆಹಚ್ಚಿದ್ದಾರೆ. ಈ ಡ್ರಗ್ ಜಾಲದ ರೂವಾರಿ ಲಂಡನ್‌ಗೆ ಪರಾರಿಯಾಗಿದ್ದಾನೆ.
ಅ.2ರಂದು ದಿಲ್ಲಿಯ ಮಹಪಲ್‌ಪುರ್ ಎಂಬಲ್ಲಿ ಗೋದಾಮಿನಿಂದ ವಶಪಡಿಸಿಕೊಂಡ 600 ಕೆಜಿ ಡ್ರಗ್ಸ್ ಜಾಲವೇ ರಮೇಶ್ ನಗರದಲ್ಲೂ ಇನ್ನೊಂದು ಗೋದಾಮಿನಲ್ಲಿ ಕೊಕೈನ್ ಇಟ್ಟಿತ್ತು. ಈ ಜಾಲಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕನ ಸಹಿತ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ತುಷಾರ್ ಗೋಯಲ್, ಹಿಮಾಂಶು ಕುಮಾರ್, ಔರಂಗಜೇಬ್ ಸಿದ್ದಿಕಿ ಮತ್ತು ಭರತ್‌ಕುಮಾರ್ ಜೈನ್ ಸೆರೆಯಾಗಿರುವ ಆರೋಪಿಗಳು. ಈ ಪೈಕಿ ತುಷಾರ್ ಗೋಯಲ್ ದಿಲ್ಲಿಯ ಕಾಂಗ್ರೆಸ್ ನಾಯಕನಾಗಿದ್ದ. ಅಖ್ಲಕ್ ಎಂಬ ಇನ್ನೋರ್ವ ಆರೋಪಿ ಉತ್ತರ ಪ್ರದೇಶದಲ್ಲಿ ಸೆರೆಯಾಗಿದ್ದಾನೆ. ದುಬೈಯಲ್ಲಿರುವ ವೀರೇಂದ್ರ ಬಸೋಯ ಎಂಬಾತ ಡ್ರಗ್ಸ್ ಜಾಲದ ಕಿಂಗ್‌ಪಿನ್ ಆಗಿದ್ದು, ಅವನ ಬಂಧನಕ್ಕೆ ದಿಲ್ಲಿ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.