ಪಾಕಿಗಳನ್ನು ಕರೆತಂದು ನೆಲೆಗೊಳಿಸುವ ಜಾಲ ಸಕ್ರಿಯ
ಬೆಂಗಳೂರು: ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ಥಾನದ 14 ಮಂದಿಯನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಸೆರೆಯಾದ ಪಾಕಿಗಳ ಸಂಖ್ಯೆ 22ಕ್ಕೇರಿದೆ. ಪ್ರಕರಣದ ಕಿಂಗ್ಪಿನ್ ಪರ್ವೇಜ್ ಬಂಧನವಾದ ಬೆನ್ನಲ್ಲೇ ಮತ್ತಷ್ಟು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 22 ಮಂದಿ ಪಾಕ್ ಪ್ರಜೆಗಳನ್ನು ಬಂಧಿಸಿದ್ದು ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಪಾಕ್ ಪ್ರಜೆಗಳ ಬಂಧನಕ್ಕೆ ಚೆನ್ನೈ, ದಿಲ್ಲಿ, ಹೈದರಾಬಾದ್ಗೆ ಪೊಲೀಸರ ತಂಡ ತೆರಳಿತ್ತು. ಮೆಹದಿ ಫೌಂಡೇಷನ್ ಸಂಪರ್ಕದಲ್ಲಿದ್ದ 22 ಮಂದಿ ಧರ್ಮ ಪ್ರಚಾರಕ್ಕಾಗಿ ವಿವಿಧ ರಾಜ್ಯಗಳಲ್ಲಿ ತಂಗಿದ್ದರು ಎನ್ನಲಾಗಿದೆ. ಆದರೆ ಅವರ ನಿಜವಾದ ಉದ್ದೇಶ ಇನ್ನಷ್ಟೇ ತಿಳಿದುಬರಬೇಕಾಗಿದೆ.
ಬೆಂಗಳೂರಿನ ಜಿಗಣಿಯಲ್ಲಿ ನೆಲೆಸಿದ್ದ ಪಾಸ್ಥಾನದ ನಾಲ್ಕು ಮಂದಿಯ ಬಂಧನವಾದ ಬಳಿಕ ಪಾಕಿಗಳನ್ನು ಭಾರತಕ್ಕೆ ಕರೆತಂದು ನಕಲಿ ದಾಖಲೆಪತ್ರಗಳನ್ನು ಸೃಷ್ಟಿಸಿ ವ್ಯವಸ್ಥಿತವಾಗಿ ನೆಲೆಗೊಳಿಸುವ ಜಾಲ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಬಂಧಿತರ ವಿಚಾರಣೆ ಸಿಕ್ಕಿದ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಜಿಗಣಿ ಪೊಲೀಸರು ದೇಶದಾದ್ಯಂತ ಸಕ್ರಿಯರಾಗಿದ್ದ 14 ಮಂದಿ ಪಾಕಿಸ್ಥಾನನೀಯರನ್ನು ಬಂಧಿಸಿದ್ದಾರೆ.
2019ರಲ್ಲಿ ಬೆಂಗಳೂರಿಗೆ ಬಂದಿದ್ದ ಸೈಯದ್ ಮತ್ತು ಕುಟುಂಬ ಧರ್ಮ ಪ್ರಚೋದಕರಾಗಿ ಕೆಲಸ ಮಾಡುತ್ತಿದ್ದರು. ಯೂಟ್ಯೂಬ್ನಲ್ಲಿ ಪ್ರಚಾರ ಕಾರ್ಯ ಮಾಡುತ್ತಾ ಇದ್ದರು. ಇವರು ಭಾರತಕ್ಕೆ 2014ರಲ್ಲೇ ಬಂದಿದ್ದರು. ನಕಲಿ ಹೆಸರಲ್ಲಿ ಆಧಾರ್ ಮಾಡಿಸಿಕೊಂಡಿದ್ದರು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.