ಅಹಿಂದ ಮೂಲಕವೇ ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ವ್ಯೂಹ ರಚನೆಯ ಊಹಾಪೋಹ
ಬೆಂಗಳೂರು: ಮುಡಾ ಹಗರಣದಿಂದ ಕಂಗೆಟ್ಟಿರುವ ಸಿದ್ದರಾಮಯ್ಯನವರನ್ನು ಕುರ್ಚಿಯಿಂದ ಕೆಳಗಿಳಿಸಲು ಕಾಂಗ್ರೆಸ್‌ನೊಳಗೆಯೇ ತೀವ್ರ ಪ್ರಯತ್ನ ನಡೆಯುತ್ತಿರುವ ಅನುಮಾನ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳಿಂದ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಜಿ.ಪರಮೇಶ್ವರ್ ಬಹಳ ಕ್ರಿಯಾಶೀಲರಾಗಿ ಓಡಾಟ ನಡೆಸುತ್ತಿರುವುದರ ಹಿಂದೆ ನಾನಾ ರೀತಿಯ ಊಹಾಪೋಹಗಳು ಹರಡುತ್ತಿವೆ. ನಿನ್ನೆ ರಾತ್ರಿ ಮೈಸೂರಿನಲ್ಲಿ ಸತೀಶ್ ಜಾರಕಿಹೊಳಿ, ಜಿ. ಪರಮೇಶ್ವರ್ ಮತ್ತು ಎಚ್.ಸಿ.ಮಹದೇವಪ್ಪ ಡಿನ್ನರ್ ನೆಪದಲ್ಲಿ ರಹಸ್ಯ ಸಮಾಲೋಚನೆ ನಡೆಸಿರುವುದು ಮತ್ತಷ್ಟು ಕುತೂಹಲ ಉಂಟುಮಾಡಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಸಚಿವ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯನವರ ತವರು ಜಿಲ್ಲೆಯಾದ ಮೈಸೂರಿಗೆ ಭೇಟಿ ನೀಡಿ, ಸ್ಥಳೀಯ ಶಾಸಕರು ಹಾಗೂ ಸಚಿವರೊಂದಿಗೆ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮಂಗಳವಾರ ಮೈಸೂರಿಗೆ ಭೇಟಿ ನೀಡಿದ್ದ ಸತೀಶ್ ಜಾರಕಿಹೊಳಿ ಸ್ಥಳೀಯ ಶಾಸಕರೊಂದಿಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಚಾಮರಾಜನಗರ ಸಂಸದ ಸುನೀಲ್ ಬೋಸ್ ಮನೆಯಲ್ಲಿ ʻಅಹಿಂದʼ ನಾಯಕರ ಡಿನ್ನರ್ ಮೀಟಿಂಗ್‌ನಲ್ಲೂ ಭಾಗಿಯಾಗಿದ್ದಾರೆ. ಡಿನ್ನರ್ ಸಭೆಯಲ್ಲಿ ಸಚಿವತ್ರಯರಾದ ಡಾ.ಎಚ್.ಸಿ ಮಹದೇವಪ್ಪ, ಗೃಹ ಸಚಿವ ಡಾ.ಜಿ ಪರಮೇಶ್ವರ್, ಸಚಿವ ಸತೀಶ್ ಜಾರಕಿಹೊಳಿ ಭಾಗಿಯಾಗಿದ್ದಾರೆ. ಮೂವರು ಹಿರಿಯ ಸಚಿವರು ಡಿನ್ನರ್ ನೆಪದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಸಭೆಗಾಗಿಯೆ ಇಡೀ ದಿನ ಮೈಸೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಉಳಿದಿದ್ದರು. ಯಾವುದೇ ಅಧಿಕೃತ ಕಾರ್ಯಕ್ರಮ ಇರದಿದ್ದರೂ ಇಡೀ ದಿನ ಮೈಸೂರಿನಲ್ಲಿ ಇದ್ದು ರಾತ್ರಿ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆ ಚರ್ಚೆ ವಿಚಾರದಲ್ಲಿ ಇದೀಗ ಡಿನ್ನರ್ ಮೀಟಿಂಗ್ ಸಹ ಮಹತ್ವ ಪಡೆದುಕೊಂಡಿದೆ.
ಸೋಮವಾರವಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಅವರ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಶಿಕಾರಿಪುರದಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ಕುಟ್ರಳ್ಳಿ ಟೋಲ್‌ನಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದ್ದರು.