ಪುತ್ತೂರು: ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವಿದ್ಯಾಮಾತಾ ಅಕಾಡೆಮಿಯಲ್ಲಿ ಸಶಸ್ತ್ರ ಪಡೆಗಳ ನೇಮಕಾತಿಗಳಿಗೆ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಸಹಯೋಗದಲ್ಲಿ ಆರೋಗ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ದ್ವಾರಕಾ ಕನ್ ಸ್ಟ್ರಕ್ಷನ್ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್, ಭವಿಷ್ಯದ ಯೋಧರಿಗೆ ಭದ್ರ ಬುನಾದಿ ಹಾಕುತ್ತಿರುವ ವಿದ್ಯಾಮಾತಾ ಅಕಾಡೆಮಿಗೆ ಸದಾ ನಾವು ಬೆನ್ನೆಲುಬಾಗಿ ನಿಂತು ಗ್ರಾಮೀಣ ಪ್ರದೇಶದ ಯುವ ಜನತೆ ದೇಶ ಸೇವೆಗೆ ಸೇರುವ ಕನಸನ್ನು ನನಸಾಗಿಸಲು ಬದ್ದರಾಗಿದ್ದೆವೆ ಎಂದು ಅಕಾಡೆಮಿಯ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು,
ಅತಿಥಿಯಾಗಿ ಲಯನ್ಸ್ ಕ್ಲಬ್ ಪುತ್ತೂರು ಯುವದ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವುದರ ಮೂಲಕ ತನ್ನದೇ ಆದ ಮೈಲುಗಲ್ಲನ್ನು ಸ್ಥಾಪಿಸಿರುವ ವಿದ್ಯಾಮಾತಾ ಅಕಾಡೆಮಿ ಸಶಸ್ತ್ರ ಪಡೆಗಳ ನೇಮಕಾತಿಗಳಿಗೆ ಕೂಡ ತರಬೇತಿ ನೀಡಿ ಯಶಸ್ವಿಯಾಗಿರುವುದು ಶ್ಲಾಘನೀಯ ಹಾಗೂ ಅಕಾಡೆಮಿಯ ಈ ಕಾರ್ಯಗಳಿಗೆ ನಾವೆಲ್ಲರೂ ಜೊತೆಯಾಗಿ ನಿಲ್ಲುವ ಕಾರ್ಯವಾಗಬೇಕು ಎಂದು ಹೇಳಿದರು.
ವಿದ್ಯಾಮಾತಾ ಅಕಾಡೆಮಿಗೆ ಬೆಂಬಲವಾಗಿ ನಿಂತಿರುವ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಕೋಶಾಧಿಕಾರಿ ವತ್ಸಲಾ ಪದ್ಮನಾಭ ಶುಭ ಹಾರೈಸಿದರು.
ಮುಳಿಯ ಫಿಟ್ ನೆಸ್ ಮತ್ತು ವೆಲ್ ನೆಸ್ ಸೆಂಟರ್ ನ ತರಬೇತುದಾರ ಸುನಿಲ್ ರಾಮಕೃಷ್ಣ, ಭವಿಷ್ಯದ ಸೇನಾನಿಗಳಿಗೆ ತಮ್ಮ ದೈಹಿಕ ಸದೃಢತೆಯ ಜೊತೆಗೆ ತಮ್ಮ ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ಸವಿಸ್ತಾರವಾಗಿ ತರಬೇತಿ ನೀಡಿ ಸಶಸ್ತ್ರ ಪಡೆಗಳ ನೇಮಕಾತಿಯ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಹೊಸ ಹುರುಪನ್ನು ತಂದರು.
ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಶಸ್ತ್ರ ಪಡೆಗಳ ನೇಮಕಾತಿಯಲ್ಲಿ ದೈಹಿಕ ಸದೃಢತಾ ಪರೀಕ್ಷೆಯ ಮಹತ್ವ ಹಾಗೇ ಸಂಸ್ಥೆಯ ಸಾಧನೆಯ ಕುರಿತು ಬೆಳಕು ಚೆಲ್ಲಿದರು,
ವಿದ್ಯಾಮಾತಾ ಅಕಾಡೆಮಿಯ ದೈಹಿಕ ಸದೃಢತೆಯ ತರಬೇತುದಾರ ವಿಜೇತ್ ಕುಮಾರ್, ತರಬೇತುದಾರರಾದ ಚಂದ್ರಕಾಂತ್, ಚೇತನಾ ಸತೀಶ್ ಹಾಗೂ ಸಿಬ್ಬಂದಿ ಮಿಥುನ್ ರೈ, ಸಶಸ್ತ್ರ ಪಡೆಗಳ ನೇಮಕಾತಿಯ ತರಬೇತಿಯಲ್ಲಿರುವ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.