ಪುತ್ತೂರು: ದಕ್ಷಿಣ ಭಾರತದ ಏಕೈಕ ಯೋಧ ಸ್ಮಾರಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪುತ್ತೂರಿನ ಕಿಲ್ಲೆ ಮೈದಾನದ ಬಳಿಯ ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ಹಾನಿ ಮಾಡುವ ಪ್ರಯತ್ನವನ್ನು ದುಷ್ಕರ್ಮಿಗಳು ಎಸಗಿರುವುದು ಬೆಳಕಿಗೆ ಬಂದಿದೆ. ಸ್ಮಾರಕದಲ್ಲಿ ದೀಪ ಬೆಳಗುವ ವ್ಯವಸ್ಥೆಗಾಗಿ ಜೋಡಣೆ ಮಾಡಲಾಗಿರುವ ಗ್ಯಾಸ್ ಸಿಲಿಂಡರ್ನ ರಕ್ಷಣೆಗಾಗಿ ಅಳವಡಿಸಿರುವ ಮುಚ್ಚಳದ ಬೀಗವನ್ನು ಒಡೆದು ಮುಚ್ಚಳಕ್ಕೆ ಹಾನಿ ಮಾಡಲಾಗಿದೆ. ಅಂತೆಯೇ ಮುಚ್ಚಳವನ್ನು ತೆರೆದು ಅದನ್ನು ಹಿಂದಿನ ಗೋಡೆಗೆ ಬಡಿದು ಗೋಡೆಗೂ ಹಾನಿ ಮಾಡಲಾಗಿದೆ.
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ನಿರ್ಮಿಸಲ್ಪಟ್ಟ ಈ ಸ್ಮಾರಕ ನಗರ ಸಭೆಯ ಆಡಳಿತಕ್ಕೊಳಪಟ್ಟಿದ್ದು, ಅಂಬಿಕಾ ಸಂಸ್ಥೆಗಳು ನಿರ್ವಹಿಸಿಕೊಂಡು ಬರುತ್ತಿವೆ. ಆದರೆ ಇದೀಗ ದೇಶದ ಹೆಮ್ಮೆಯ ಯೋಧರ ಗೌರವಾರ್ಥವಾಗಿ ನಿರ್ಮಿಸಲಾಗಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದೆಡೆ ದುಷ್ಕರ್ಮಿಗಳ ಕಾಕ ದೃಷ್ಟಿ ಬಿದ್ದಿದೆ.
ಈ ಹಿಂದೆಯೂ ಅಮರ್ ಜವಾನ್ ಸ್ಮಾರಕವನ್ನು ಹಾನಿಗೆಡವುವ ಪ್ರಯತ್ನವನ್ನು ದುಷ್ಕರ್ಮಿಗಳು ಮಾಡಿರುವುದು ಪೋಲೀಸ್ ದೂರಿನ ಮೂಲಕ ದಾಖಲಾಗಿದೆ. ಆದರೆ ಪುನಃ ಇಂತಹ ದುಸ್ಸಾಹಸಕ್ಕೆ ಮುಂದಾಗಿರುವುದು ಅಚ್ಚರಿ ಎನಿಸಿದೆ.