ಮಂಗಳೂರು: ಗ್ರಾಮ ಪಂಚಾಯತ್ ಗಳ ಬಲವರ್ಧನೆಗೆ ಕೇಂದ್ರದ ಬಿಜೆಪಿಯ ನರೇಂದ್ರ ಮೋದಿಯವರ ನಾಯಕತ್ವದ ಎನ್ ಡಿಎ ಸರಕಾರ ಕಾರಣ ಎಂದು ಮಾಜಿ ಸಂಸದ ಹಾಗೂ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಅವರು ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಗ್ರಾಮ ಪಂಚಾಯತ್ ಗಳಿಗೆ ಕೇಂದ್ರದಿಂದ ನೇರವಾಗಿ ಅನುದಾನ ಬಿಡುಗಡೆ, ನರೇಗಾ, ಸ್ವರ್ಣ ಗ್ರಾಮ ಯೋಜನೆ, ಪಂಚಾಯತ್ ಸದಸ್ಯರಿಗೆ ಗೌರವಧನ ಬಿಜೆಪಿ ನೇತೃತ್ವದ ಸರಕಾರದ ಕೊಡುಗೆಗಳು. ಕಳೆದ ಆರೂವರೆ ವರ್ಷ ಬಿಜೆಪಿ ಬೆಂಬಲಿತ ಶಾಸಕ ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ಸದಸ್ಯರಾಗಿ ಸಕ್ರೀಯರಾಗಿದ್ದರು. ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಕಾರಣ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಿಶೋರ್ ಕುಮಾರ್ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತಿದ್ದಾರೆ. ಅವರನ್ನು ಬೆಂಬಲಿಸಿ ಬಿಜೆಪಿ ಯನ್ನು ಈ ಬಾರಿಯೂ ಗೆಲ್ಲಿಸಬೇಕೆಂದು ತಾನು ಮತದಾರರಲ್ಲಿನ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯರ ನೇತೃತ್ವದ ಸರಕಾರ ಹಗರಣಗಳಿಂದ ಕೂಡಿದ ಸರಕಾರವಾಗಿದೆ. ಅಭಿವೃದ್ಧಿ ಯೋಜನೆ ಹಣ ಬಿಡುಗಡೆ ಆಗುತ್ತಿಲ್ಲ. ಶಾಸಕರ ನಿಧಿಯ ಯೋಜನೆಗಳಿಗೂ ಅನುದಾನ ಬಿಡುಗಡೆ ಆಗಿಲ್ಲ. ಹಿಂದಿನ ಯಡಿಯೂರಪ್ಪ, ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯಕ್ಕೆ ಜಿಲ್ಲೆಗೆ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ದಸರಾ ಕಾರ್ಯಕ್ರಮದಲ್ಲೂ ಮುಖ್ಯ ಮಂತ್ರಿ ರಾಜಕೀಯ ಮಾತುಗಳನ್ನಾಡಿದ್ದಾರೆ. ಭೃಷ್ಟಾಚಾರ ಮಿತಿ ಮೀರಿದೆ. ರೈತರ ಆತ್ಮಹತ್ಯೆ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಮುಖ್ಯ ಮಂತ್ರಿಯವರ ಮೇಲೆ ಎಫ್ ಐಆರ್ ದಾಖಲಾದರೂ ಅವರು ರಾಜಿನಾಮೆ ಕೊಟ್ಟಿಲ್ಲ. ಅವರು ಆ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದರು.
ನಿಮ್ಮ ಮುಂದಿನ ರಾಜಕೀಯ ಭವಿಷ್ಯ ಏನು ಎಂದು ಮಾಧ್ಯಮ ಪ್ರತಿನಿಧಿ ಗಳ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಕಾರ್ಯಕರ್ತನಾಗಿ ಇರುತ್ತೇನೆ. ನಾನು ವಿಧಾನ ಪರಿಷತ್ ಅಭ್ಯರ್ಥಿಯ ಆಕಾಂಕ್ಷಿಯಾಗಿರಲಿಲ್ಲ. ಪಕ್ಷ ನನಗೆ ಮೂರು ಬಾರಿ ಸಂಸದನಾಗುವ ಅವಕಾಶ, ರಾಜ್ಯಾಧ್ಯಕ್ಷ ನಾಗುವ ಅವಕಾಶ ನಾನು ಯಾವುದೇ ಬೇಡಿಕೆ ನೀಡದೆ ಕೊಟ್ಟಿದೆ. ಅದಕ್ಕಾಗಿ ನಾನು ಪಕ್ಷಕ್ಕೆ ಋಣಿಯಾಗಿದ್ದೇನೆ. ಮುಂದೆಯೂ ಪಕ್ಷ ಘಟನೆಯ ಕೆಲಸ ಮಾಡುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ದ.ಕ ಜಿ ಬೆಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಪ್ರದಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಉಪಾಧ್ಯಕ್ಷ ರಾಕೇಶ್ ರೈ,ಜಿಲ್ಲಾ ವಕ್ತಾರ ರಾಜಗೋಪಾಲ ರೈ, ವಿಧಾನ ಪರಿಷತ್ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಜಿಲ್ಲಾ ಸಂಘದ ಕೋಶಾಧಿಕಾರಿ ಸಂಜಯ ಪ್ರಭು ಮೊದಲಾದವರು ಉಪಸ್ಥಿತರಿದ್ದರು.