ಪಂಚಾಯತ್ ಪೂರೈಸಿರುವ ನೀರಿನಿಂದ ರೋಗ ಹರಡಿದ ಅನುಮಾನ
ಉಡುಪಿ: ಬೈಂದೂರು ಸಮೀಪ ಉಪ್ಪುಂದ ಬಳಿ ಕಲುಷಿತ ನೀರು ಸೇವಿಸಿ 200ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದು, ಕೆಲವರಿಗೆ ಕಾಲರಾ ಬಾಧಿಸಿದ ಅನುಮಾನವಿದೆ. ಉಪ್ಪುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ 6ನೇ ಮತ್ತು 7ನೇ ವಾರ್ಡಿನ ಮಡಿಕಲ್ ಮತ್ತು ಕರ್ಕಿಕಳಿ ಎಂಬ ಊರುಗಳಿಗೆ ಪಂಚಾಯಿತಿ ಪೂರೈಸಿದ ನೀರು ಕುಡಿದು ಜನರು ಅಸ್ವಸ್ಥರಾಗಿದ್ದಾರೆ. ಕೆಲವರು ಕಾಲರಾದಿಂದ ಬಳಲುತ್ತಿದ್ದು, ಹಲವು ಮಂದಿ ಆಸ್ಪತ್ರಗೆ ದಾಖಲಾಗಿದ್ದಾರೆ.
ಪಂಚಾಯಿತಿ ಪೂರೈಸಿದ ನೀರನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ. ಇಲ್ಲಿಂದ ವರದಿ ಬಂದ ಬಳಿಕ ಇಡೀ ಊರಿಗೆ ರೋಗ ಹರಡಲು ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಮೂರು ದಿನಗಳಿಂದ ಹಲವು ಮಂದಿ ವಾಂತಿಭೇದಿಯಿಂದ ಬಳಲಿದ್ದಾರೆ ಎನ್ನಲಾಗಿದೆ. ಎರಡು ವಾರ್ಡ್ಗಳ ಪ್ರತಿ ಮನೆಯಲ್ಲಿ ವಾಂತಿಭೇದಿಯಿಂದ ಬಳಲಿದವರು ಇದ್ದಾರೆ. 80 ವರ್ಷದ ವೃದ್ಧರೊಬ್ಬರು ಸ್ಥಿತಿ ಹದಗೆಟ್ಟಿದ್ದು, ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದು 3 ದಿನಗಳಾಗಿದ್ದು, ಈಗ ಸಮಸ್ಯೆ ಬಹುತೇಕ ಪರಿಹಾರಗೊಂಡಿದೆ.
ನಿನ್ನೆ ಇಲ್ಲಿಗೆ ಬೈಂದೂರು ತಹಶೀಲ್ದಾರ್ ಪ್ರದೀಪ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. 145 ಮಂದಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೆಲ್ಲ ಚೇತರಿಕೆಯ ಹಾದಿಯಲ್ಲಿದ್ದು, ಯಾರೂ ಅಪಾಯಕಾರಿ ಸ್ಥಿತಿಯಲ್ಲಿ ಇಲ್ಲ ಎಂದು ಆರೋಗ್ಯ ಅಧಿಕಾರಿಗಳು ಈ ವೇಳೆ ಮಾಹಿತಿ ನೀಡಿದ್ದಾರೆ.