ಪೂರ್ವ ಮಾಹಿತಿ ನೀಡದೆ ಅಧಿಕಾರಿಗಳು ಕಚೇರಿಗೆ ಬಂದು ಹೋಗುತ್ತಿದ್ದಾರೆ ಎಂದು ದೂರು
ಹೊಸದಿಲ್ಲಿ: ಕೇಂದ್ರ ಲೋಕೋಪಯೋಗಿ ಇಲಾಖೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮತ್ತು ಟಾಟಾ ಪ್ರಾಜೆಕ್ಟ್‌ಗಳ ಅಧಿಕಾರಿಗಳು ತನಗೆ ಮಾಹಿತಿ ನೀಡದೆ ಸಂಸತ್ತಿನ ಕೊಠಡಿಗೆ ಪ್ರವೇಶಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್‌ಕರ್ ಅವರಿಗೆ ಪತ್ರ ಬರೆದಿದ್ದಾರೆ.
ಸೆಪ್ಟೆಂಬರ್ 28 ರಂದು ಸಂಸತ್ ಭವನದಲ್ಲಿ ನನ್ನ ಚೇಂಬರ್ ಕೊಠಡಿ ಸಂಖ್ಯೆ ಜಿ-19ನ್ನು CPWD, CISF ಮತ್ತು ಟಾಟಾ ಪ್ರಾಜೆಕ್ಟ್‌ಗಳ ಅಧಿಕಾರಿಗಳು ನನಗೆ ಅಥವಾ ನನ್ನ ಕಚೇರಿಗೆ ಯಾವುದೇ ಪೂರ್ವ ಸೂಚನೆ ನೀಡದೆ ಪ್ರವೇಶಿಸಿದ್ದಾರೆ ಎಂದು ತಿಳಿದು ನನಗೆ ತುಂಬಾ ಆಘಾತವಾಗಿದೆ ಎಂದು ಪತ್ರದಲ್ಲಿ ರಾಜ್ಯಸಭೆಯ ವಿರೋಧಪಕ್ಷದ ನಾಯಕರಾಗಿರುವ ಖರ್ಗೆ ಹೇಳಿದ್ದಾರೆ.
ಇದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ತಮ್ಮ ದೂರಿಗೆ ಸೂಕ್ತ ಮಹತ್ವ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದೊಂದು ಅಸಾಧಾರಣ ಬೆಳವಣಿಗೆ. ಇದು ಸಂಸತ್ತಿನ ಸದಸ್ಯನಾಗಿ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕನಾಗಿ ನನ್ನ ಸವಲತ್ತುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವ ಕ್ರಮವಾಗಿದೆ, ಈ ಅಕ್ರಮ ಪ್ರವೇಶ ನನಗೆ ಮತ್ತು ನನ್ನ ಸ್ಥಾನಕ್ಕೆ ಅಗೌರವವಾಗಿದ್ದು, ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ ಎಂದಿದ್ದಾರೆ. ಯಾರ ಅಧಿಕಾರ ಮತ್ತು ಸೂಚನೆಗಳ ಅಡಿಯಲ್ಲಿ ಅನುಮತಿಯಿಲ್ಲದೆ ನನ್ನ ಕೋಣೆಗೆ ಪ್ರವೇಶಿಸಿದ್ದಾರೆ ಎಂಬುದು ನನಗೆ ಗೊತ್ತಾಗಬೇಕಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ರಾಜ್ಯಸಭಾಧ್ಯಕ್ಷರಾಗಿರುವ ಧನ್‌ಕರ್ ಅವರನ್ನು ಒತ್ತಾಯಿಸಿದ್ದಾರೆ.