ಟಿಪ್ಪು ವಂಶಸ್ಥರು ಮತ್ತು ರಾಮ-ಹನುಮಂತನ ಭಕ್ತರ ನಡುವೆ ಸ್ಪರ್ಧೆ ಎಂದು ಬಣ್ಣನೆ
ಮಂಗಳೂರು : ಟಿಪ್ಪು ಆರಾಧಕರು ಇಲ್ಲಿ ಉಳಿಯುವುದು ಬೇಡ, ಅಂಥವರನ್ನು ಓಡಿಸಬೇಕು ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಅವರ ಹೇಳಿಕೆ ಚುನಾವಣೆ ಹೊಸ್ತಿಲಲ್ಲಿ ವಿವಾದದ ಕಿಡಿ ಹೊತ್ತಿಸಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಬುಧವಾರ ಸಾರ್ವಜನಿಕ ಸಭೆಯಲ್ಲಿ ಕಟೀಲು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾಷಣದಲ್ಲಿ ಕಟೀಲು ರಾಮ ಮತ್ತು ಟಿಪ್ಪುವನ್ನು ಎಳೆದು ತಂದಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಈ ಚುನಾವಣೆಯಲ್ಲಿ ಟಿಪ್ಪು ಸುಲ್ತಾನ್ ವಂಶಸ್ಥರು ಮತ್ತು ರಾಮ-ಹನುಮಂತನ ಭಕ್ತರ ನಡುವೆ ಸ್ಪರ್ಧೆ ನಡೆಯಲಿದೆ. ಟಿಪ್ಪು ಬೆಂಬಲಿಗರನ್ನು ಮನೆಗೆ ವಾಪಸ್ ಕಳುಹಿಸಬೇಕಿದೆ. ಅದೇ ರೀತಿಯಲ್ಲಿ ಚುನಾವಣೆಯ ತೀರ್ಪು ಬರಲಿ ಎಂದಿದ್ದಾರೆ.
ಕರ್ನಾಟಕಕ್ಕೆ ಟಿಪ್ಪು ಬೆಂಬಲಿಗರು ಬೇಕೋ ಅಥವಾ ರಾಮ ಮತ್ತು ಹನುಮಂತನ ಭಕ್ತರು ಬೇಕೋ ಎಂಬುದನ್ನು ಜನರೇ ನಿರ್ಧರಿಸಬೇಕು. ನೀವು ಹನುಮಂತನನ್ನು ಪೂಜಿಸುತ್ತೀರಾ ಅಥವಾ ಟಿಪ್ಪು ಭಜನೆ ಮಾಡುತ್ತೀರಾ? ಹಾಗಾದರೆ ನೀವು ಟಿಪ್ಪು ಭಜನೆ ಮಾಡುವವರನ್ನು ಓಡಿಸುತ್ತೀರಾ? ಈ ರಾಜ್ಯಕ್ಕೆ ರಾಮ ಭಕ್ತರು ಮತ್ತು ಹನುಮ ಭಕ್ತರು ಬೇಕಾದರೆ ಇಂದೇ ಸಂಕಲ್ಪ ಮಾಡಿ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಟಿಪ್ಪು ಆರಾಧಕರು ಇಲ್ಲಿ ಉಳಿಯುವುದು ಬೇಡ ಟಿಪ್ಪುವನ್ನು ಆರಾಧಿಸುವ ಜನರು ಇಲ್ಲಿ ಉಳಿಯುವುದು ಬೇಡ. ಭಗವಾನ್ ರಾಮ ಮತ್ತು ಹನುಮಂತನನ್ನು ಅನುಸರಿಸುವ ಜನರಿಗೆ ಈ ಭೂಮಿ ಮೀಸಲಾಗಿದೆ. ಹನುಮಂತನ ನಾಡಿನಲ್ಲಿ ನಾನು ಸವಾಲು ಹಾಕುತ್ತೇನೆ, ಟಿಪ್ಪುವನ್ನು ಪ್ರೀತಿಸುವವರು ಇಲ್ಲಿ ಉಳಿಯಬಾರದು, ರಾಮ ಭಜನೆ ಮಾಡುವವರು, ಹನುಮಂತೋತ್ಸವ ಮಾಡುವವರು ಇಲ್ಲೇ ಉಳಿಯಬೇಕು ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಹಿಂದೆಯೂ ವಿವಾದಿತ ಹೇಳಿಕೆ ನೀಡಿದ್ದ ಕಟೀಲ್ ಕಟೀಲ್ ಅವರು ಟಿಪ್ಪು ವರ್ಸಸ್ ಸಾವರ್ಕರ್ ಸ್ಪರ್ಧೆ ಎಂದು ಕರೆದಿದ್ದರು. ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಡೆಯುವುದಿಲ್ಲ. ಬದಲಿಗೆ ಸಾವರ್ಕರ್ ಮತ್ತು ಟಿಪ್ಪು ಸಿದ್ಧಾಂತಗಳ ನಡುವೆ ನಡೆಯಲಿದೆ ಎಂದು ಶಿವಮೊಗ್ಗದಲ್ಲಿ ಸಾರ್ವಜನಿಕ ಭಾಷಣದಲ್ಲಿ ತಿಳಿಸಿದ್ದರು. ಇದು ವಿರೋಧ ಪಕ್ಷಗಳ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು.