ನಕಲಿ ಸರ್ಟಿಫಿಕೆಟ್ ಮೂಲಕ ಲಾಯರ್ ಡಿಗ್ರಿ ಪಡೆದಿರುವುದು ಬಯಲು
ಬೆಂಗಳೂರು : ಪ್ರಸ್ತುತ ಬಿಗ್‌ಬಾಸ್ ಸ್ಪರ್ಧಿಯಾಗಿರುವ ವಕೀಲ ಕೆ.ಎನ್.ಜಗದೀಶ್ ನಕಲಿ ಪ್ರಮಾಣಪತ್ರದ ಮೂಲಕ ಲಾಯರ್ ಡಿಗ್ರಿ ಪಡೆದುಕೊಂಡಿರುವ ವಂಚನೆ ಬೆಳಕಿಗೆ ಬಂದ ಬಳಿಕ ಬಾರ್ ಕೌನ್ಸಿಲ್ ಅವರನ್ನು ಅಮಾನ್ಯಗೊಳಿಸಿದೆ. ಇನ್ನು ಮುಂದೆ ಜಗದೀಶ್ ಕರಿಕೋಟು ಹಾಕಿಕೊಂಡು ಕೋರ್ಟ್‌ನಲ್ಲಿ ವಾದ ಮಾಡುವಂತಿಲ್ಲ.
ವಕೀಲಿಕೆಯಿಂದ ಹೆಚ್ಚಾಗಿ ತನ್ನ ಅತಿರೇಕದ ವರ್ತನೆ ಮತ್ತು ವಿವಾದಗಳಿಂದಲೇ ಪ್ರಸಿದ್ಧಿಗೆ ಬಂದಿದ್ದ ಜಗದೀಶ್ ಅವರನ್ನು ಇದೇ ಮಾನದಂಡದ ಮೇಲೆ ಈ ಸಲ ಬಿಗ್‌ಬಾಸ್ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. ಬಿಗ್‌ಬಾಸ್ ಮನೆಯ ಒಳಗಿರುವಾಗಲೇ ಅವರು ನಕಲಿ ವಕೀಲ ಎಂಬ ವಿಚಾರ ಬೆಳಕಿಗೆ ಬಂದಿದೆ.
ಹಿಮಾಂಶು ಭಾಟಿ ಎಂಬವರ ದೂರನ್ನು ಆಧರಿಸಿ ತನಿಖೆ ನಡೆಸಿದಾಗ ಜಗದೀಶ್ 12ನೇ ತರಗತಿಯ ಮಾರ್ಕ್ಸ್ ಕಾರ್ಡ್ ನಕಲಿ ಎನ್ನುವ ಸತ್ಯ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಡಿಗ್ರಿ ಹಾಗೂ ಎಲ್ಎಲ್ಬಿ ಪ್ರಮಾಣಪತ್ರವನ್ನು ಅಮಾನ್ಯ ಮಾಡಲಾಗಿದೆ. ಆದರೆ ಲಾಯರ್ ಪರವಾನಗಿಯನ್ನು ದಿಲ್ಲಿ ಬಾರ್ ಕೌನ್ಸಿಲ್ ರದ್ದು ಮಾಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಮೇ 7ರಂದೇ ಜಗದೀಶ್ ಪರವಾನಗಿಯನ್ನು ದಿಲ್ಲಿ ಬಾರ್ ಕೌನ್ಸಿಲ್ ರದ್ದು ಮಾಡಿದೆ.
ಬಾರ್ ಕೌನ್ಸಿಲ್ ಆದೇಶದ ಪ್ರಕಾರ, ಜಗದೀಶ್ ಕುಮಾರ್ ಅವರು ಯಾವುದೇ ಕೋರ್ಟ್‌ನಲ್ಲಿ ವಾದ ಮಂಡನೆ ಮಾಡುವಂತಿಲ್ಲ, ಅವರು ವಕೀಲರೇ ಅಲ್ಲ. ಅವರು ಹೆಸರಿಗಷ್ಟೇ ತಾನು ವಕೀಲ ಎಂದು ಹೇಳಿಕೊಳ್ಳುತ್ತಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಜನರು ಅವರ ಹಿಂದಿನ ವಿಡಿಯೋಗಳನ್ನು ಅಪ್‌ಲೋಡ್ ಮಾಡಿ ಲೇವಡಿ ಮಾಡುತ್ತಿದ್ದಾರೆ.