ವಿಪರೀತ ಬೆಲೆ ಏರಿಕೆ ಪರಿಣಾಮ ಕಳ್ಳದಾರಿಯ ಮೂಲಕ ಬರುತ್ತಿದೆ ಚೀನದ ಬೆಳ್ಳುಳ್ಳಿ
ಉಡುಪಿ: ನಿಷೇಧಿತ ಚೀನ ಬೆಳ್ಳುಳ್ಳಿ ಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಉಡುಪಿ ನಗರಸಭೆ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ಗುಣಮಟ್ಟದ ಶಂಕೆ ಹಿನ್ನೆಲೆಯಲ್ಲಿ 12 ಟನ್ ಬೆಳ್ಳುಳ್ಳಿ ವಶಪಡಿಸಿಕೊಂಡಿದ್ದಾರೆ.
ನಗರಸಭೆ ಕಮಿಷನರ್ ರಾಯಪ್ಪ ನೇತೃತ್ವದ ತಂಡ ಮತ್ತು ಎಪಿಎಂಸಿ ಅಧಿಕಾರಿಗಳು ದಾಳಿ ನಡೆಸಿ ಚೀನ ಬೆಳ್ಳುಳ್ಳಿ ದಾಸ್ತಾನು ಪರಿಶೀಲಿಸಿದರು. ಚೀನ ಬೆಳ್ಳುಳ್ಳಿಯಲ್ಲಿ ಅತಿಯಾದ ಕೀಟನಾಶಕ ಅಂಶ ಇರುವುದರಿಂದ ಭಾರತ ಸರ್ಕಾರ ಅದರ ಮಾರಾಟವನ್ನು ದಶಕದ ಹಿಂದೆಯೇ ನಿಷೇಧಿಸಿದೆ. ಆದರೆ ಇತ್ತೀಚೆಗೆ ಬೆಳ್ಳುಳ್ಳಿ ಬೆಲೆ ವಿಪರೀತ ಏರಿಕೆಯಾಗಿರುವ ಕಾರಣ ಚೀನದಿಂದ ಬೆಳ್ಳುಳ್ಳಿಯನ್ನು ಕಳ್ಳದಾರಿಯ ಮೂಲಕ ತರಿಸಿ ದೇಶಿ ಬೆಳ್ಳುಳ್ಳಿ ಜೊತೆ ಬೆರಕೆ ಮಾಡಿ ಮಾಡುತ್ತಿರುವ ದಂಧೆ ವ್ಯಾಪಕವಾಗಿ ನಡೆಯುತ್ತಿದೆ.
ಉಡುಪಿ ಎಪಿಎಂಸಿ ಮಾರುಕಟ್ಟೆಗೂ ಚೀನ ಬೆಳ್ಳುಳ್ಳಿ ಪ್ರವೇಶಿಸಿದ ಕುರಿತು ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಚೀನದ ಬೆಳ್ಳುಳ್ಳಿ ಹೋಲುವ ಬೆಳ್ಳುಳ್ಳಿ ದಾಸ್ತಾನಿನಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ 12 ಟನ್ ಬೆಳ್ಳುಳ್ಳಿ ವಶಪಡಿಸಿಕೊಳ್ಳಲಾಗಿದೆ. ಬೆಳ್ಳುಳ್ಳಿಯ ಗುಣಮಟ್ಟ ಅನುಮಾನಾಸ್ಪದವಾಗಿದೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿಯ ಎಪಿಎಂಸಿ ಮಾರುಕಟ್ಟೆಗೆ ಸರಬರಾಜಾಗಿದ್ದ ಬೆಳ್ಳುಳ್ಳಿಯ ಸಂಪೂರ್ಣ ದಾಸ್ತಾನನ್ನು ತಂಡವು ವಶಪಡಿಸಿಕೊಂಡಿದ್ದು, ಚೀನದ ಬೆಳ್ಳುಳ್ಳಿಯೇ ಎಂಬುದನ್ನು ಪರೀಕ್ಷಿಸಲು ಮಂಗಳೂರಿನ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಲಾಗಿದೆ. ಪರೀಕ್ಷಾ ವರದಿ ಬಂದ ನಂತರ ಪಾಲಿಕೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಆಯುಕ್ತ ರಾಯಪ್ಪ ತಿಳಿಸಿದ್ದಾರೆ.
ಉಡುಪಿ ನಗರಸಭೆಯ ಆಡಳಿತ ವ್ಯಾಪ್ತಿಯಲ್ಲಿರುವ ಮಾರುಕಟ್ಟೆ ಹಾಗೂ ಎಪಿಎಂಸಿಯಲ್ಲಿ ಮಾರಾಟಗಾರರು ರಾಸಾಯನಿಕಯುಕ್ತ ಬೆಳ್ಳುಳ್ಳಿ ಸೇರಿದಂತೆ ತರಕಾರಿ ಮತ್ತು ಹಣ್ಣುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಅಂತಹ ಉತ್ಪನ್ನಗಳ ಪೂರೈಕೆ ಮತ್ತು ಮಾರಾಟದ ಮೇಲೆ ನಿಗಾ ಇಡಲು ನಗರಸಭೆಯಿಂದ ಸಿಬ್ಬಂದಿಯನ್ನು ನೇಮಿಸಲಾಗಿದೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳಿಂದ ದೇಶದಲ್ಲಿ ಬೆಳ್ಳುಳ್ಳಿ ಬೆಲೆ ವಿಪರೀತ ಏರಿಕೆಯಾಗಿದೆ. ಕೆಜಿಗೆ 80-100 ರೂ.ಗೆ ಸಿಗುತ್ತಿದ್ದ ಬೆಳ್ಳುಳ್ಳಿಗೆ ಈಗ 300-350 ರೂ. ಇದ್ದು, ಈ ಹಿನ್ನೆಲೆಯಲ್ಲಿ ಅಗ್ಗದ ಬೆಲೆಯ ಚೀನದ ಬೆಳ್ಳುಳ್ಳಿ ಅಕ್ರಮವಾಗಿ ಮಾರುಕಟ್ಟೆ ಪ್ರವೇಶಿಸಿದೆ. ಚೀನದ ಬೆಳ್ಳುಳ್ಳಿಯಲ್ಲಿ ಅಪಾಯಕಾರಿ ರಾಸಾಯನಿಕ ಅಂಶ ಇರುವ ಕಾರಣ ಇದರ ಆಮದನ್ನು ನಿಷೇಧಿಸಲಾಗಿದೆ.