ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾವ್ಧಾನ್ ಎಂಬಲ್ಲಿ ಇಂದು ಬೆಳಗ್ಗೆ ಹೆಲಿಕಾಪ್ಟರ್ ಪತನಗೊಂಡು ಅದರಲ್ಲಿದ್ದ ಇಬ್ಬರು ಪೈಲಟ್ಗಳು ಹಾಗೂ ಓರ್ವ ಒಂಜಿನಿಯರ್ ಸಾವಿಗೀಡಾಗಿದ್ದಾರೆ. ಸಮೀಪದ ಹೆಲಿಪ್ಯಾಡ್ನಿಂದ ಟೇಕಾಫ್ ಆಗಿದ್ದ ಹೆಲಿಕಾಪ್ಟರ್ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಹೊತ್ತಿ ಉರಿದಿದ್ದು, ಅದರಲ್ಲಿದ್ದ ಮೂವರು ಸುಟ್ಟುಕರಕಲಾಗಿದ್ದಾರೆ.
ಪೊಲೀಸರು, ಅಗ್ನಿಶಾಮಕ ದಳ ಹಾಗೂ ವಿಪತ್ತು ಪರಿಹಾರ ದಳ ಸ್ಥಳಕ್ಕೆ ಧಾವಿಸಿದೆ. ಬೆಳಗ್ಗೆ 6.50ರ ಸುಮಾರಿಗೆ ಈ ಘಟನೆ ನಡೆದಿದೆ. ದಟ್ಟ ಮಂಜು ಆವರಿಸಿದ್ದದ್ದು ಅವಘಡಕ್ಕೆ ಕಾರಣ ಎನ್ನಲಾಗಿದೆ. ಹೆಲಿಕಾಪ್ಟರ್ ಹೆರಿಟೇಜ್ ಏವಿಯೇಶನ್ ಸಂಸ್ಥೆಗೆ ಸೇರಿದ್ದು ಎಂದು ತಿಳಿದುಬಂದಿದೆ.
ಎನ್ಸಿಪಿ ಈ ಹೆಲಿಕಾಪ್ಟರನ್ನು ಬಾಡಿಗೆಗೆ ಪಡೆದಿತ್ತು. ಅದು ಇಂದು ಬೆಳಗ್ಗೆ ಮುಂಬಯಿಗೆ ಹೋಗುತ್ತಿರುವಾಗ ಪತನಗೊಂಡಿದೆ. ಎನ್ಸಿಪಿ ನಾಯಕ ಸುನಿಲ್ ತಟ್ಕರೆ ಇದೇ ಹೆಲಿಕಾಪ್ಟರ್ನಲ್ಲಿ ಇಂದು ರಾಯಗಢಕ್ಕೆ ಪ್ರಯಾಣಿಸಬೇಕಿತ್ತು.
ಪೈಲಟ್ಗಳಾದ ಪರಮ್ಜಿತ್ ಸಿಂಗ್ ಮತ್ತು ಜಿ.ಕೆ.ಪಿಳ್ಳೆ ಹಾಗೂ ಇಂಜಿನಿಯರ್ ಪ್ರೀತಮ್ ಭಾರದ್ವಾಜ್ ಮೃತಪಟ್ಟಿರುವ ದುರ್ದೈವಿಗಳು.
ಮಂಜು ಈ ಅವಘಡಕ್ಕೆ ಪ್ರಾಥಮಿಕ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ. ತನಿಖೆಯ ನಂತರವಷ್ಟೇ ಘಟನೆಗೆ ನಿಜವಾದ ಕಾರಣ ತಿಳಿಯಲಿದೆ. ಅಪಘಾತದ ನಂತರ ಹೆಲಿಕಾಪ್ಟರ್ಗೆ ಬೆಂಕಿ ಹೊತ್ತಿಕೊಂಡಿದೆ, ಇದರಿಂದಾಗಿ ಮೂವರ ದೇಹವೂ ಸುಟ್ಟು ಕರಕಲಾಗಿದೆ.