ರೋಹತಂಗ್ ಪಾಸ್ ದುರ್ಗಮ ಬೆಟ್ಟದಲ್ಲಿ ಪತನಗೊಂಡಿದ್ದ ವಾಯುಪಡೆ ವಿಮಾನ
ಹೊಸದಿಲ್ಲಿ : ಹಿಮಾಚಲ ಪ್ರದೇಶದ ರೋಹತಂಗ್ ಪಾಸ್ನ ದುರ್ಗಮ ಬೆಟ್ಟದಲ್ಲಿ 56 ವರ್ಷದ ಹಿಂದೆ ಪತನಗೊಂಡಿದ್ದ ವಾಯುಪಡೆ ವಿಮಾನದಲ್ಲಿದ್ದ ನಾಲ್ವರ ಮೃತದೇಹಗಳು ನಿನ್ನೆ ಪರ್ವತಾರೋಹಿಗಳ ತಂಡವೊಂದಕ್ಕೆ ಸಿಕ್ಕಿದೆ.
1968 ಫೆಬ್ರವರಿ 7ರಂದು 102 ಪ್ರಯಾಣಿಕರಿದ್ದ ಎಎನ್-12 ಎಂಬ ವಾಯುಪಡೆಯ ವಿಮಾನ ಚಂಡೀಗಢದಿಂದ ಪ್ರಯಾಣ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಹಿಮಾಚಲ ಪ್ರದೇಶದ ರೋಹತಂಗ್ ಪಾಸ್ ಸಮೀಪ ದುರ್ಗಮ ಬೆಟ್ಟದಲ್ಲಿ ಪತನಗೊಂಡಿತ್ತು. ವಿಮಾನದ ಅವಶೇಷ ಮತ್ತು ಅದರಲ್ಲಿದ್ದ ಪ್ರಯಾಣಿಕರು ಹಿಮರಾಶಿಯೊಳಗೆ ಸಮಾಧಿಯಾಗಿದ್ದರು. ಡೋಗ್ರ ಸ್ಕೌಟ್ಸ್ ಮತ್ತು ತಿರಂಗ ಮೌಂಟೇನ್ ರೆಸ್ಕ್ಯೂ ತಂಡ ಸಾಕಷ್ಟು ಹುಡುಕಾಡಿದರೂ ಮೃತದೇಹಗಳು ಸಿಕ್ಕಿರಲಿಲ್ಲ. 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಂಸ್ಥೆಯ ಪರ್ವಾತರೋಹಿಗಳ ತಂಡವೊಂದಕ್ಕೆ ಮೊದಲ ಬಾರಿ ವಿಮಾನದ ಅವಶೇಷ ಸಿಕ್ಕಿತ್ತು. ನಂತರ 2005, 2006, 2013 ಮತ್ತು 2019ರಲ್ಲಿ ಹುಡುಕಾಟ ಕಾರ್ಯಾಚರಣೆ ನಡೆಸಲಾಗಿತ್ತು.
2019ರ ಹುಡುಕಾಟ ಕಾರ್ಯಾಚರಣೆಯಲ್ಲಿ ಐದು ಶವಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿತ್ತು. ಈಗ ಚಂದ್ರಭಾಗ ಮೌಂಟೇನ್ ಎಕ್ಸ್ಪಿಡೀಶನ್ ತಂಡಕ್ಕೆ ನಾಲ್ಕು ಶವಗಳು ಸಿಕ್ಕಿದ್ದು, ಈ ಪೈಕಿ ಮೂರು ಶವಗಳ ಗುರುತು ಪತ್ತೆಹಚ್ಚಲಾಗಿದೆ. ಮಲ್ಖನ್ ಸಿಂಗ್ ಎಂಬವರನ್ನು ಅವರ ಜೇಬಿನಲ್ಲಿದ್ದ ರಸೀದಿ, ಸಿಪಾಯ್ ನಾರಾಯಣ ಸಿಂಗ್ ಎಂಬವರನ್ನು ಅವರ ಜೇಬಿನಲ್ಲಿದ್ದ ಸಂಬಳದ ಚೀಟಿ ಸಹಾಯದಿಂದ ಗುರುತಿಸಲಾಗಿದೆ. ಇನ್ನೊಬ್ಬರನ್ನು ಥಾಮಸ್ ಚರಣ್ ಎಂದು ಗುರುತಿಸಲಾಗಿದೆ. ಇವರೆಲ್ಲ ಸೈನ್ಯದ ಬೇರೆ ಬೇರೆ ವಿಭಾಗಗಳಲ್ಲಿ ಕರ್ತವ್ಯದಲ್ಲಿದ್ದವರು. ನಾಲ್ಕು ಶವಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಇನ್ನುಳಿದವರಿಗಾಗಿ ಅ.10ರ ತನಕ ಹುಡುಕಾಟ ಮುಂದುವರಿಯಲಿದೆ.