ಇ.ಡಿ.ಗಿದೆ ವಿಚಾರಣೆಗೆ ಕರೆಯುವ, ಬಂಧಿಸುವ ವಿಶೇಷಾಧಿಕಾರ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ.) ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ನಾಲ್ವರ ವಿರುದ್ಧ ಎನ್ಫೋರ್ಸ್ಮೆಂಟ್ ಕೇಸ್ ಇನ್ಫಾರ್ಮೇಶನ್ ರಿಪೋರ್ಟ್ (ಇಸಿಐಆರ್) ದಾಖಲಿಸಿಕೊಂಡಿದೆ. ಈಗಾಗಲೇ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸಹಿತ ಕೆಲವರ ವಿರುದ್ಧ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಇದೀಗ ಇ.ಡಿ. ಕೂಡ ರಂಗ ಪ್ರವೇಶ ಮಾಡಿರುವುದರಿಂದ ಸಿದ್ದರಾಮಯ್ಯನವರ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ.
ಮೈಸೂರು ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಿದ್ದರೂ ಈ ತನಿಖೆ ಪಾರದರ್ಶಕವಾಗಿರುವ ವಿಶ್ವಾಸ ಇಲ್ಲ ಎಂದು ಹೇಳಿ ದೂರುದಾರ ಸ್ನೇಹಮಯಿ ಕೃಷ್ಣ ಜಾರಿ ನಿರ್ದೇಶನಾಲಯಕ್ಕೂ (ಇ.ಡಿ) ದೂರು ನೀಡಿದ್ದರು. ಮೈಸೂರು ಲೋಕಾಯುಕ್ತದಲ್ಲಿ ದಾಖಲಾದ ಎಫ್ಐಆರ್ ಆಧರಿಸಿ ಇದೀಗ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಇಡಿ ಸಂಸ್ಥೆಯಿಂದಲೂ ಪ್ರಕರಣದ ಮಾಹಿತಿ ವರದಿ (ಇಸಿಐಆರ್) ದಾಖಲಿಸಿಕೊಂಡಿದೆ.
ಲೋಕಾಯುಕ್ತ ಎಫ್ಐಆರ್ನಲ್ಲಿ ಉಲ್ಲೇಖವಾದ ಹೆಸರುಗಳ ಮೇಲೆ ಜಾರಿ ನಿರ್ದೇಶನಾಲಯ ಇಸಿಐಆರ್ ದಾಖಲಿಸಿದೆ. ಇ.ಡಿ ಕೇಸಿನಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿ ನಂಬರ್ 1 (ಎ1) ಆಗಿದ್ದಾರೆ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ, ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನು ಮಾರಾಟ ಮಾಡಿದ್ದ ದೇವರಾಜು ಅವರನ್ನೂ ಇಸಿಐಆರ್ನಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.
ECIR ಅಂದ್ರೇನು?
ಪಿಎಂಎಲ್ಎ ಅಡಿ ಇಸಿಐಆರ್ ದಾಖಲಾಗಿದ್ದು, ಇದು ಪೊಲೀಸರ ಎಫ್ಐಆರ್ಗೆ ಸಮಾನವಾಗಿದೆ. ಇದರಡಿ ಸಮನ್ಸ್ ನೀಡಿ ವಿಚಾರಣೆಗೆ ಕರೆಯಬಲ್ಲ ವಿಶೇಷ ಅಧಿಕಾರ ಇ.ಡಿ.ಗಿದೆ. ತನಿಖೆ ಹಂತದಲ್ಲಿ ಆಸ್ತಿಗಳನ್ನು ಜಪ್ತಿ ಮಾಡಬಹುದು. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಇ.ಡಿ. ಇತ್ತೀಚೆಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಈ ವಿಶೇಷಾಧಿಕಾರ ಬಳಸಿ ಬಂಧಿಸಿತ್ತು.