ಆತ್ಮಚರಿತ್ರೆಯ ಪುಸ್ತಕಗಳು – ಬದುಕಿಗೆ ದಾರಿದೀಪಗಳು

ವಿಕಸನದ ಕುತೂಹಲಿಗಳಿಗೆ ಇವು ಪ್ರೇರಣೆಯ ಹಣತೆಗಳು

ಬಾಲ್ಯದಿಂದಲೂ ಪುಸ್ತಕಗಳನ್ನು ಓದುತ್ತಾ ಬಂದ ನನಗೆ ಅತಿ ಆಪ್ತವಾಗುವ ಪುಸ್ತಕಗಳು ಅಂದರೆ ಆತ್ಮಚರಿತ್ರೆಯ ಪುಸ್ತಕಗಳು (Autobiographies).
ಪ್ರತಿಯೊಬ್ಬನ ಬದುಕಿನಿಂದ ನಾವು ಸಾಕಷ್ಟು ಪಾಠಗಳನ್ನು ಕಲಿಯಬಹುದು ಎಂಬ ನಂಬಿಕೆ ಒಂದೆಡೆ ಆದರೆ, ಅವರು ಬದುಕಿ ತೋರಿದ ಮೌಲ್ಯಗಳು ನಮಗೂ ಅನುಕರಣೀಯ ಎಂಬ ಭರವಸೆ ಇನ್ನೊಂದೆಡೆ. ಬೇರೆಯವರ ತಪ್ಪುಗಳಿಂದ ಅಥವಾ ಸೋಲುಗಳಿಂದ ಕೂಡ ನಾವು ಬೇಕಾದಷ್ಟು ಕಲಿಯಬಹುದು.
ಎಲ್ಲ ಭಾಷೆಯ ಸಾಹಿತ್ಯಗಳಲ್ಲಿ ಆತ್ಮಚರಿತ್ರೆಯ ಪುಸ್ತಕಗಳ ಸಿಂಹಪಾಲು ಇದೆ.

ಆಟೋಬಯೋಗ್ರಾಫಿಗಳನ್ನು ಏಕೆ ಓದಬೇಕು?



































 
 

ಸಾಮಾನ್ಯವಾಗಿ ಯಾವುದೇ ಲೆಜೆಂಡ್ ವ್ಯಕ್ತಿಯ ಬದುಕಿನಲ್ಲಿ ದೊಡ್ಡ ಹೋರಾಟ, ಸಂಘರ್ಷಗಳು ಇರುತ್ತವೆ. ಅದರಲ್ಲಿ ಎಷ್ಟೋ ಜನರು ಶೂನ್ಯದಿಂದ ಹೊರಟು ಭಾರಿ ದೊಡ್ಡ ಸಾಧನೆಗಳನ್ನು ಮಾಡಿರುತ್ತಾರೆ.
ಕೊಳಚೆಗೇರಿಯಿಂದ ಆರಂಭವಾದ ಹಲವರ ಜರ್ನಿಗಳು ಯಶಸ್ಸಿನ ತುತ್ತತುದಿಯನ್ನು ತಲುಪಿದ ನಿದರ್ಶನಗಳು ಇವೆ. ನಮಗೆ ಅಂತಹವರ ಹೊಳೆಯುವ ಸಾಧನೆಗಳು ಗೊತ್ತಿರುತ್ತವೆ. ಆದರೆ ಅವರು ಸಾಗಿ ಬಂದಿರುವ ಕಷ್ಟದ ಹಾದಿ, ಸಂಘರ್ಷ ಮತ್ತು ಹೋರಾಟದ ದಾರಿಗಳು ಗೊತ್ತಿರುವುದಿಲ್ಲ. ಒಬ್ಬ ಲೆಜೆಂಡ್ ಹೇಗೆ ರೂಪುಗೊಂಡ ಎಂದು ಗೊತ್ತಿರುವುದಿಲ್ಲ. ಆತ್ಮಚರಿತ್ರೆಯ ಪುಸ್ತಕಗಳನ್ನು ಓದುವುದರಿಂದ ನಮಗೆ ವ್ಯಕ್ತಿ ಮತ್ತು ವ್ಯಕ್ತಿತ್ವ ಎರಡೂ ಪರಿಚಯ ಆಗುತ್ತವೆ.

Making of Gandhi is much more important than Gandhi himself

ಸಕ್ಸಸ್ ಕೇವಲ ಒಂದು ಉತ್ಪನ್ನ (Product) ಎಂದು ತಪ್ಪಾಗಿ ನಾವು ಭಾವಿಸಿಕೊಂಡಿರುತ್ತೇವೆ. ಅದು ಒಂದು ಪ್ರಕ್ರಿಯೆ (Process) ಎಂದು ನಮಗೆ ಅರ್ಥವಾಗಬೇಕಾದರೆ ನಾವು ಅವರ ಬದುಕನ್ನು ಸರಿಯಾಗಿ ಅಧ್ಯಯನ ಮಾಡಬೇಕು. ಯಶಸ್ಸು ಒಂದು ಡೆಸ್ಟಿನಿ ಮಾತ್ರ ಅಲ್ಲ, ಅದು ಒಂದು ರೋಡ್ ಮ್ಯಾಪ್ (Road Map) ಕೂಡ ಹೌದು ಎಂದು ನಮಗೆ ಅರ್ಥ ಆಗಬೇಕಾದರೆ ನಾವು ಆಟೋಬಯೋಗ್ರಫಿಗಳನ್ನು ಹೆಚ್ಚು ಓದಬೇಕು. ನಾನೊಬ್ಬ ವಿಕಸನದ ತರಬೇತುದಾರನಾಗಿ ನನಗೆ ಇಂತಹ ಪುಸ್ತಕಗಳನ್ನು ಓದುವುದರಿಂದ ನೂರಾರು ಪ್ರೇರಣೆ ಕೊಡುವ ಘಟನೆಗಳು, ಉದ್ಧರಣೆಗಳು, ಯಶೋಗಾಥೆಗಳು, ಸೋಲಿನ ಕಥೆಗಳು ದೊರೆಯುತ್ತವೆ. ಯಾವುದೇ ಲೆಜೆಂಡ್ ವ್ಯಕ್ತಿಯ ಬದುಕಿಗಿಂತ ಆತನ ಅಥವಾ ಆಕೆಯ ಬದುಕಿನ ಮೇಕಿಂಗ್ ನಮಗೆ ಹೆಚ್ಚು ಪ್ರೇರಣೆ ನೀಡುತ್ತದೆ.

ಒಳ್ಳೆಯ ಆಟೋಗ್ರಾಫಿ ಹೇಗಿರಬೇಕು?

ಸಾಮಾನ್ಯವಾಗಿ ಯಾರದೋ ಬದುಕಿನ ಕಥೆಯನ್ನು ಯಾರೋ ಬೇರೆಯವರು ಬರೆದಿರುತ್ತಾರೆ. ಅವುಗಳನ್ನು ಬಯೋಗ್ರಾಫಿ ಎಂದು ಕರೆಯುತ್ತಾರೆ. ಅವರ ಕಥೆಯನ್ನು ಅವರೇ ಬರೆದರೆ ಅವುಗಳನ್ನು ಆಟೋಬಯೋಗ್ರಾಫಿ ಎನ್ನುತ್ತಾರೆ. ಬೇರೆಯವರಿಗೆ ಡಿಕ್ಟೇಟ್ ಮಾಡಿ ತಮ್ಮ ಕಥೆಯನ್ನು ಬರೆಸುವವರೂ ಇರುತ್ತಾರೆ.
ಆಟೋಬಯೋಗ್ರಫಿಗಳು ಬಯೋಗ್ರಾಫಿಗಳಿಗಿಂತ ಹೆಚ್ಚು ಮೌಲ್ಯಯುತ ಆಗಿರುತ್ತವೆ. ಏಕೆಂದರೆ ಅವುಗಳು ವಾಸ್ತವಕ್ಕೆ ಹತ್ತಿರವಾಗಿರುತ್ತವೆ. ಅಲ್ಲಿ ಬರೀ ಯಶಸ್ಸಿನ ಕಥೆಗಳು ಮಾತ್ರವಲ್ಲ ಸೋಲಿನ ಕಥೆಗಳು ಕೂಡ ಇರುತ್ತವೆ. ಅವುಗಳಲ್ಲಿ ಲೆಜೆಂಡ್ಸ್ ಬದುಕಿನ ಹೊಳೆಯುವ ಪುಟಗಳು ಮಾತ್ರವಲ್ಲ, ಅವರ ಖಾಸಗಿ ಜೀವನದ ಒಂದಷ್ಟು ಕತ್ತಲೆಯ ಪುಟಗಳು (Dark Pages) ಕೂಡ ಇರಬೇಕು ಎನ್ನುವುದು ನನ್ನ ಅಭಿಪ್ರಾಯ. ಅವುಗಳು ಬೇಡ ಎಂದು ಹೇಳುವವರೂ ಇದ್ದಾರೆ.

ಯಾರ ಬದುಕೂ ಪೂರ್ತಿ ತೆರೆದ ಪುಸ್ತಕ ಆಗಿರುವುದಿಲ್ಲ. ಅದರಲ್ಲಿ ಒಂದಿಷ್ಟು ಚಿದಂಬರ ರಹಸ್ಯಗಳು, ಗುಟ್ಟುಗಳು, ಬಹಿರಂಗವಾಗಿ ಹೇಳಲು ಸಂಕೋಚಪಡುವ ವಿಷಯಗಳು ಇದ್ದರೆ ಅದು ಪರಿಪೂರ್ಣ ಪುಸ್ತಕ ಆಗುತ್ತದೆ.

ಈ ಆಶಯದ ಜೊತೆಗೆ ನಾನು ಓದಿರುವ ನೂರಾರು ಆತ್ಮಚರಿತ್ರೆಯ ಪುಸ್ತಕಗಳಲ್ಲಿ ನನಗೆ ತುಂಬಾ ಇಷ್ಟವಾದ, ನನಗೆ ಹೆಚ್ಚು ಪ್ರೇರಣೆ ನೀಡಿದ ಕೆಲವು ಅತ್ಯುತ್ತಮ ಆಟೋಬಯೋಗ್ರಾಫಿಗಳನ್ನು ಇಲ್ಲಿ ಪಟ್ಟಿ ಮಾಡುತ್ತೇನೆ. ಬಿಡುವು ಮಾಡಿಕೊಂಡು ನೀವು ಓದುತ್ತೀರಿ ಎನ್ನುವುದು ನನ್ನ ಆಶಯ.

1) ನನ್ನ ಸತ್ಯಾನ್ವೇಷಣೆ – ಗಾಂಧೀಜಿ

My Experiments with Truth ಎನ್ನುವುದು ಗಾಂಧೀಜಿಯವರ ಆತ್ಮಚರಿತ್ರೆ. ಅದರಲ್ಲಿ ನಾನು ಮೇಲೆ ಉಲ್ಲೇಖ ಮಾಡಿದ ಬ್ರೈಟ್ ಮತ್ತು ಡಾರ್ಕ್ ಎರಡೂ ಮುಖಗಳು ಇವೆ. ಗಾಂಧಿ ಬಾಲ್ಯದಲ್ಲಿ ಹೇಗಿದ್ದರು ಎಂಬ ಭಾಗ ನಿಮ್ಮನ್ನು ಬೆಚ್ಚಿಬೀಳಿಸುತ್ತದೆ. ಏಕೆಂದರೆ ಅಲ್ಲಿ ಒಬ್ಬ ಹೆದರುಪುಕ್ಕ, ಕತ್ತಲೆಯನ್ನು ಕಂಡು ಹೆದರುವ, ಸುಳ್ಳು ಹೇಳುವ, ದುರಭ್ಯಾಸಗಳ ಮೂಟೆಯಾಗಿರುವ ಹುಡುಗ ಸಿಗುತ್ತಾನೆ. ತನ್ನ ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ, ಕೆಲವು ಬಾರಿ ದಬ್ಬಾಳಿಕೆ ಮಾಡುವ ಗಂಡ ಸಿಗುತ್ತಾನೆ. ಮುಂದೆ ಅವರಲ್ಲಿ ಆದ ಪರಿವರ್ತನೆಗಳು, ಹೇಗೆ ಅವರು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಇಡೀ ಭಾರತವನ್ನು ಎತ್ತಿ ನಿಲ್ಲಿಸಿದರು, ದಕ್ಷಿಣ ಆಫ್ರಿಕಾದಲ್ಲಿ ಅವರು ಮಾಡಿದ ಹೋರಾಟಗಳು…ಇವುಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಈ ಪುಸ್ತಕ ಭಾರತದ ಹೆಚ್ಚಿನ ಎಲ್ಲ ಭಾಷೆಗಳಿಗೂ ಅನುವಾದ ಆಗಿದ್ದು ಗೊರೂರು ಅವರ ಕನ್ನಡದ ಅನುವಾದ ಸೊಗಸಾಗಿದೆ.

2) ಲಿವಿಂಗ್ ವಿದ್ ಎ ಪರ್ಪಸ್ – ಡಾಕ್ಟರ್ ಸರ್ವೆಪಲ್ಲಿ ರಾಧಾಕೃಷ್ಣನ್

ಭಾರತದ ಎರಡನೇ ರಾಷ್ಟ್ರಪತಿ ಆಗಿ ಆಯ್ಕೆಯಾದ ಮತ್ತು ಅತ್ಯಂತ ಯಶಸ್ವಿ ರಾಷ್ಟ್ರಪತಿ ಆದ ಡಾಕ್ಟರ್ ಎಸ್.ರಾಧಾಕೃಷ್ಣನ್ ಅವರು ಶಿಕ್ಷಕನಾಗಿ ಪಡೆದ ಖುಷಿ, ಅವರ ವಿದ್ಯಾರ್ಥಿಗಳು ಅವರಿಗೆ ತೋರಿದ ಪ್ರೀತಿ ಈ ಪುಸ್ತಕದ ಕ್ರೀಮ್ ಭಾಗ. ಗಾಂಧಿಯ ಆತ್ಮಚರಿತ್ರೆಯ ಹಾಗೆ ಇಲ್ಲಿ ಕೂಡ ತನ್ನ ಜೀವನದ ಕಪ್ಪು ಪುಟಗಳ ನೂರಾರು ಘಟನೆಗಳನ್ನು ಯಾವ ಸಂಕೋಚವೂ ಇಲ್ಲದೆ ರಾಧಾಕೃಷ್ಣನ್ ಅವರಿಗೆ ಬರೆಯಲು ಸಾಧ್ಯವಾಯಿತು ಅಂದರೆ ಅವರು ನಿಜಕ್ಕೂ ಗ್ರೇಟ್.

3) ನನ್ನ ಭಯಾಗ್ರಾಫಿ – ಬೀಚಿ

ಕನ್ನಡದ ಖ್ಯಾತ ಹಾಸ್ಯ ಲೇಖಕರಾದ ಬೀಚಿ ಬರೆದ ಈ ಪುಸ್ತಕವು ಉತ್ತಮ ವಿಡಂಬನೆ, ಕ್ಲೀಷೆ, ಭಾಷಾ ವೈಭವವನ್ನು, ಕಚಗುಳಿ ಕೊಡುವ ಕೆಣಕು ನುಡಿಗಳನ್ನು ಹೊಂದಿದೆ. ಬೀಚಿಯವರು ತುಂಬಾ ಸರಸವಾಗಿ ಈ ಪುಸ್ತಕ ಬರೆಯುತ್ತಾ ಹೋಗಿದ್ದಾರೆ. ಅವರು ತನ್ನ ಮೇಲೆಯೇ ಮಾಡುವ ಹಾಸ್ಯಗಳು ಈ ಪುಸ್ತಕದ ಶ್ರೇಷ್ಠತೆಯನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತವೆ.

4) WISE and OTHER WISE – ಸುಧಾಮೂರ್ತಿ

ಸುಧಾಮೂರ್ತಿ ಬರೆದಿರುವ ಎಲ್ಲ ಪುಸ್ತಕಗಳು ನನ್ನ ಓದಿನಲ್ಲಿ ಇವೆ. ಅದರಲ್ಲಿಯೂ ಮೇಲೆ ಕಾಣಿಸಿದ ಈ ಪುಸ್ತಕ ಅವರ ಆತ್ಮಚರಿತ್ರೆಗೆ ತುಂಬಾ ಹತ್ತಿರವಿದೆ. ಇದು ಅವರ ಬದುಕಿನ ಹೋರಾಟವನ್ನು ಚಂದವಾಗಿ ತೆರೆದಿಡುತ್ತದೆ. ಇಡೀ ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಬ್ಬಳು ಹಳ್ಳಿಯಿಂದ ಬಂದ ಹೆಣ್ಣುಮಗಳು ನೂರಾರು ಜನ ಹುಡುಗರ ಮಧ್ಯೆ ನಾಲ್ಕು ವರ್ಷ ಹೇಗೆ ತಾಳ್ಮೆಯಿಂದ ವ್ಯವಹಾರ ಮಾಡಿ ಅವರ ಮನಸನ್ನು ಗೆದ್ದರು? ಭಾರತದ ಅತ್ಯಂತ ದೊಡ್ಡ ಐಟಿ ಇಂಡಸ್ಟ್ರಿಯನ್ನು ಸ್ಥಾಪನೆ ಮಾಡಲು ತನ್ನ ಗಂಡನಿಗೆ ಹೇಗೆ ನೆರವಾದರು? ಇತ್ಯಾದಿ ಪಾರ್ಟ್ ತುಂಬಾನೇ ಅದ್ಭುತವಾಗಿದೆ.

5) ಬಾನಯಾನ – ಕ್ಯಾಪ್ಟನ್ ಗೋಪಿನಾಥ್

ಶೂನ್ಯದಿಂದ ಡೆಕ್ಕನ್ ಏರ್‌ವೇಸ್, ಡೆಕ್ಕನ್ ಕಾರ್ಗೋ, ಡೆಕ್ಕನ್ ಲಾಜಿಸ್ಟಿಕ್ಸ್ ಮೊದಲಾದ ಮಹೋನ್ನತ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ ಕ್ಯಾಪ್ಟನ್ ಗೋಪಿನಾಥ್ ಎಂಬ ಸೈನಿಕನ ಕಥೆ ಇದು. ಪತ್ರಕರ್ತರಾದ ವಿಶ್ವೇಶ್ವರ ಭಟ್ಟರು ಈ ಪುಸ್ತಕವನ್ನು ಸೊಗಸಾಗಿ ಬರೆದು ಮುಗಿಸಿದ್ದಾರೆ. ಮಾಜಿ ಸೈನಿಕ ಕ್ಯಾಪ್ಟನ್ ಗೋಪಿನಾಥ್ ಆವರ ಬಾಲ್ಯದ ಹೋರಾಟದ ದಿನಗಳು ನಮಗೆ ದಟ್ಟವಾಗಿ ಪ್ರೇರಣೆ ನೀಡುತ್ತವೆ.

6) Wings of Fire (ಅಗ್ನಿಯ ರೆಕ್ಕೆಗಳು) – ಅಬ್ದುಲ್ ಕಲಾಂ

ಭಾರತದ ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿಯಾದ ಅಬ್ದುಲ್ ಕಲಾಂ ಅವರೇ ಮುತುವರ್ಜಿ ವಹಿಸಿ ಈ ಪುಸ್ತಕವನ್ನು ಬರೆದಿದ್ದಾರೆ. ಕನ್ನಡಕ್ಕೆ ಭಾಷಾಂತರ ಮಾಡಿದವರು ಅವರ ಶಿಷ್ಯ ಜಯಪ್ರಕಾಶ್. ಇದರಲ್ಲಿ ಭಾರತದ ವ್ಯೋಮಯಾನದ ಸಾಧನೆಗಳು, ಕ್ಷಿಪಣಿಗಳನ್ನು ಹಾರಿಸಿದ್ದು, ಭಾರತದ ಅಣು ಪರೀಕ್ಷೆಯ ವಿವರಗಳು ಚಂದವಾಗಿ ದಾಖಲು ಆಗಿವೆ. 2020ರಲ್ಲಿ ಭಾರತವು ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಲಿದೆ, ಅದಕ್ಕೆ ಅದರದ್ದೇ ಆದ
ಮಾನದಂಡಗಳನ್ನು ಮತ್ತು ಕಾರಣಗಳನ್ನು ಅಬ್ದುಲ್ ಕಲಾಂ ಕೊಡುತ್ತಾ ಹೋಗುವುದು ರೋಚಕ ಸಂಗತಿ.
(ನಾಳೆಗೆ ಮುಂದುವರಿಯುತ್ತದೆ)

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top