ಸೂರ್ಯನ ಸುತ್ತ ಕೆಂಪು ಉಂಗುರ ಆಕೃತಿ ರಚನೆ
ಹೊಸದಿಲ್ಲಿ : ಮುಂಬರುವ ಅಕ್ಟೋಬರ್ 2ರಂದು ಆಂಶಿಕ ಸೂರ್ಯ ಗ್ರಹಣ ಸಂಭವಿಸಲಿದೆ. ಆದರೆ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ನಾಸಾದ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ ಸೂರ್ಯ ಗ್ರಹಣ ಭಾರತೀಯ ಕಾಲಮಾನ ರಾತ್ರಿ 9.21ಕ್ಕೆ ಹಿಡಿದು ಅ.3ರಂದು ನಸುಕಿನ 3.17ಕ್ಕೆ ಬಿಡಲಿದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ಇದು ಭಾದ್ರಪದ ಮಾಸದ ಅಮವಾಸ್ಯೆ ಪಿತೃಪಕ್ಷದ ಕೊನೆಯ ದಿನ. ಸೂರ್ಯ ಗ್ರಹಣ ಭಾರತದಲ್ಲಿ ಗೋಚರಿಸದಿದ್ದರೂ ಇದರ ಪರಿಣಾಮ ಇರುತ್ತದೆ ಎಂದು ಭಾರತೀಯ ಶಾಸ್ತ್ರ ಗ್ರಂಥಗಳು ಹೇಳುತ್ತವೆ.
ಸರ್ವಪಿತೃ ಅಮಾವಾಸ್ಯೆಯ ದಿನ ಅಂದರೆ ಅಕ್ಟೋಬರ್ 2ರಂದು ಸೂರ್ಯಗ್ರಹಣ ಕನ್ಯಾರಾಶಿಯಲ್ಲಿ ಸಂಭವಿಸಲಿದೆ. ಹಿಂದೂ ಸಂಪ್ರದಾಯದ ಪ್ರಕಾರ ಸೂತಕ ಅವಧಿ ಸೂರ್ಯ ಗ್ರಹಣಕ್ಕೆ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಗ್ರಹಣದ ಸಮಯದಲ್ಲಿ ವಾತಾವರಣದಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ, ಆದ್ದರಿಂದ ಈ ಸಮಯವನ್ನು ಅಶುಭವೆಂಬ ನಂಬಿಕೆಯಿದೆ.
ಈ ವರ್ಷ ಎರಡನೇ ಬಾರಿ ಸಂಭವಿಸುತ್ತಿರುವ ಸೂರ್ಯ ಗ್ರಹಣ ದಕ್ಷಿಣ ಅಮೆರಿಕಾದಲ್ಲಿ ಉಂಗುರಾಕಾರದದಲ್ಲಿ ಗೋಚರಿಸುತ್ತದೆ. ದಕ್ಷಿಣ ಅಮೆರಿಕ, ಅಂಟಾರ್ಟಿಕಾ, ಪೆಸಿಫಿಕ್ ಸಾಗರ, ಅಟ್ಲಾಂಟಿಕ್ ಸಾಗರ, ಉತ್ತರ ಅಮೆರಿಕದಲ್ಲಿ ಭಾಗಶಃ ಗ್ರಹಣ ಗೋಚರಿಸಲಿದೆ. ಈ ಗ್ರಹಣವನ್ನು ರಿಂಗ್ ಆಫ್ ಫೈರ್ ಎಂದು ಕರೆಯಲಾಗುತ್ತದೆ. ಸೂರ್ಯನ ಸುತ್ತ ಕೆಂಪು ಉಂಗುರ ರಚನೆಯಾಗುತ್ತದೆ.