ಮ್ಯಾಂಡೊಲಿನ್ ಮೂಲಕ ಪೂರ್ವ-ಪಶ್ಚಿಮವನ್ನು ಬೆಸೆದ ಯು. ಶ್ರೀನಿವಾಸ್

45 ವರ್ಷ ಮಾತ್ರ ಬದುಕಿದ್ದ ಅವರು ಜಗತ್ತಿನಾದ್ಯಂತ ಸಾವಿರಾರು ಮ್ಯಾಂಡೊಲಿನ್ ಕಛೇರಿ ಕೊಟ್ಟಿದ್ದರು

ಪೂರ್ವಜನ್ಮದ ಸಂಸ್ಕಾರಗಳು ಇಲ್ಲದೆ ಈ ರೀತಿಯ ಸಾಧನೆ ಮಾಡಲು ಸಾಧ್ಯವೇ ಇಲ್ಲ ಎಂದು ಸಂಗೀತ ಜಗತ್ತು ಅಭಿಪ್ರಾಯಪಟ್ಟದ್ದು ಈತನ ಪ್ರತಿಭೆಯ ಕುರಿತು. ಮ್ಯಾಂಡೊಲಿನ್ ಎಂಬ ಸಂಗೀತ ವಾದ್ಯವನ್ನು ಕೈಗೆ ಎತ್ತಿಕೊಂಡು ಅದನ್ನು ಕರ್ನಾಟಕ ಸಂಗೀತಕ್ಕೆ ಒಗ್ಗಿಸಿಕೊಂಡು ಆತ ಮಾಡಿದ್ದೆಲ್ಲ ಮಿರಾಕಲ್ ಸಾಧನೆಗಳೇ. ಹನ್ನೊಂದನೇ ವರ್ಷಕ್ಕೆ ಆತ ತ್ಯಾಗರಾಜರ ಆರಾಧನೆಯಲ್ಲಿ ಎರಡು ಗಂಟೆಗಳ ಮ್ಯಾಂಡೊಲಿನ್ ಕಛೇರಿಯನ್ನು ಕೊಟ್ಟಾಗ ಸೇರಿದ್ದ ದೊಡ್ಡ ದೊಡ್ಡ ಸಂಗೀತ ವಿದ್ವಾಂಸರು ಆತನನ್ನು ‘ಭಾರತೀಯ ಸಂಗೀತದ ಮೊಜಾರ್ಟ್’ಎಂದು ಕರೆದರು. ಕೆಲವರು ಆತನನ್ನು ಸಂಗೀತ ದಿಗ್ಗಜ ಪಂಡಿತ್ ರವಿಶಂಕರ್ ಅವರ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದರು. ಇನ್ನೂ ಕೆಲವರು ಆತನು ಯೆಹೂದಿ ಮೇನುಹಿನ್ ಮತ್ತು ಬೆತೊವೆನ್ ಸಾಲಿಗೆ ಸೇರಲು ಅರ್ಹ ಎಂದು ಮಾತಾಡಿಕೊಂಡರು.

ಈ ಎಲ್ಲ ಕೀರ್ತಿಗೆ ಅರ್ಹರಾದವರು ಯು. ಶ್ರೀನಿವಾಸ್





























 
 

ಜಗತ್ತು ಆತನನ್ನು ಮ್ಯಾಂಡೊಲಿನ್ ಶ್ರೀನಿವಾಸ್ ಎಂದೇ ಕರೆಯಿತು. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪಲಕೊಲ್ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ (1969 ಫೆಬ್ರುವರಿ 28) ಯು. ಶ್ರೀನಿವಾಸ್ ಅವರ ತಂದೆ ಸತ್ಯನಾರಾಯಣ ಅವರು ಮ್ಯಾಂಡೊಲಿನ್ ಕಲಾವಿದರಾಗಿದ್ದರು. ಹಾಗೆ ಆರು ವರ್ಷದ ಹುಡುಗ ಶಾಲೆಗೆ ಹೋಗುವುದನ್ನು ಮರೆತು ಮ್ಯಾಂಡೊಲಿನ್ ಕೈಗೆ ಎತ್ತಿಕೊಂಡು ಬಿಟ್ಟಿದ್ದ. ಮಗನ ಆಸಕ್ತಿಗೆ ನೀರೆರೆದು ಮೊದಲ ಗುರುವಾದವರು ತಂದೆಯೇ. ಮುಂದೆ ಗಿಟಾರ್ ಕಲಾವಿದರಾದ ವಾಸು ರಾವ್ ಅವರು ಹುಡುಗನಿಗೆ ಏಳು ವರ್ಷ ಪಾಶ್ಚಾತ್ಯ ಸಂಗೀತ ಕ್ಲಾಸ್ ಕೊಟ್ಟರು. ತಂದೆಯ ಗುರುವಾಗಿದ್ದ ರುದ್ರರಾಜು ಸುಬ್ಬರಾಯರು ಈ ಹುಡುಗನಿಗೆ ಕರ್ನಾಟಕ ಸಂಗೀತದ ತರಗತಿ ನಡೆಸಿಕೊಟ್ಟರು. ಅವರಿಗೆ ಮ್ಯಾಂಡೊಲಿನ್ ನುಡಿಸಲು ಬರುತ್ತಿರಲಿಲ್ಲ. ಗುರುಗಳು ಬಾಯಲ್ಲಿ ಹೇಳಿದ ಯಾವುದೇ ಶಾಸ್ತ್ರೀಯ ಸ್ವರಗಳನ್ನು ಹುಡುಗ ಒಂದೇ ಉಸಿರಲ್ಲಿ ವಾದ್ಯದಲ್ಲಿ ನುಡಿಸಿ ತೋರಿಸುತ್ತಿದ್ದ. ಹನ್ನೆರಡನೇ ವಯಸ್ಸಿಗೆ ಚೆನ್ನೈ ಇಂಡಿಯನ್ ಫೈನ್ ಆರ್ಟ್ ಸೊಸೈಟಿಯ ವೇದಿಕೆಯಲ್ಲಿ ನೂರಾರು ಸಂಗೀತ ವಿದ್ವಾಂಸರ ಮುಂದೆ ಆತ ನೀಡಿದ ಮ್ಯಾಂಡೊಲಿನ್ ಕಛೇರಿಯು ಸ್ಟ್ಯಾಂಡಿಂಗ್ ಓವೇಶನ್ ಪಡೆದಿತ್ತು. ಮುಂದೆ ಆತ ಹಿಂದಿರುಗಿ ನೋಡುವ ಅಗತ್ಯವೇ ಬರಲಿಲ್ಲ.

ಮ್ಯಾಂಡೊಲಿನ್ ಒಂದು ವಿದೇಶಿ ವಾದ್ಯ ಆಗಿತ್ತು. ಅದನ್ನು ಸಿನಿಮಾದಲ್ಲಿ ನುಡಿಸಲು ಮಾತ್ರ ಯೋಗ್ಯ ಎಂಬ ಮಾತೂ ಇತ್ತು. ಅದನ್ನು ಕರ್ನಾಟಕ ಸಂಗೀತ, ವಿದೇಶದ ಜಾಝ್ ಸಂಗೀತ ಮತ್ತು ಫ್ಯೂಷನ್ ಸಂಗೀತ ಇವೆಲ್ಲದಕ್ಕೂ ಅಳವಡಿಸಿ ಗೆದ್ದವರು ಯು. ಶ್ರೀನಿವಾಸ್. ಅದುವರೆಗೆ ಇದ್ದ ಹಳೆಯ ಮ್ಯಾಂಡೊಲಿನ್ ವಾದ್ಯವನ್ನು ಎಲೆಕ್ಟ್ರಿಕ್ ವಾದ್ಯವನ್ನಾಗಿ ಬದಲಾಯಿಸಿ ಸಂಗೀತದ ಪೂರ್ವ ಮತ್ತು ಪಶ್ಚಿಮ ಎರಡನ್ನೂ ಬೆಸೆದವರು ಯು ಶ್ರೀನಿವಾಸ.

ಮ್ಯಾಂಡೊಲಿನ್‌ಗೆ ಒಬ್ಬರೇ ಅವರು ಯು ಶ್ರೀನಿವಾಸ್

ಪ್ರತಿಯೊಂದು ಭಾರತೀಯ ವಾದ್ಯಕ್ಕೂ ಒಬ್ಬೊಬ್ಬ ಲೆಜೆಂಡ್ ಕಲಾವಿದರ ಹೆಸರು ಅಂಟಿಕೊಂಡದ್ದು ನಮಗೆಲ್ಲ ಗೊತ್ತೇ ಇದೆ. ವಯೋಲಿನ್‌ಗೆ ಎಲ್. ಸುಬ್ರಮಣಿಯನ್, ಕೊಳಲಿಗೆ ಹರಿಪ್ರಸಾದ್ ಚೌರಾಸಿಯಾ, ಸಂತೂರಿಗೆ ಶಿವಕುಮಾರ್ ಶರ್ಮ, ಪಿಟೀಲಿಗೆ ಚೌಡಯ್ಯ, ವೀಣೆಗೆ ಶೇಷಣ್ಣ, ಸ್ಯಾಕ್ಸೊಫೋನ್‌ಗೆ ಕದ್ರಿ ಗೋಪಾಲ್‌ನಾಥ್, ತಬಲಾಕ್ಕೆ ಉಸ್ತಾದ್ ಝಾಕೀರ್ ಹುಸೇನ್ ಇದ್ದ ಹಾಗೆ ಮ್ಯಾಂಡೊಲಿನ್‌ಗೆ ಯು. ಶ್ರೀನಿವಾಸ್ ಒಬ್ಬರೇ ಎನ್ನುವುದು ಸಂಗೀತ ಅಭಿಮಾನಿಗಳು ಅವರಿಗೆ ನೀಡಿದ ಪ್ರಶಸ್ತಿ.

ಅವರು ಝಾಕೀರ್ ಹುಸೇನ್, ಚೌರಾಸಿಯಾ, ವಿ. ಸೆಲ್ವಗಣೇಶ್ ಅವರೊಂದಿಗೆ ನೀಡಿದ ಮೆಗಾ ಜುಗಲ್‌ಬಂದಿ ಕಾರ್ಯಕ್ರಮಗಳು ಭಾರತದಲ್ಲಿ ಭಾರಿ ಯಶಸ್ವಿ ಆದವು. ಭಾರತದ ಎಲ್ಲ ನಗರಗಳಲ್ಲಿ, ಸಂಗೀತ ಮಹೋತ್ಸವಗಳಲ್ಲಿ, ಎಲ್ಲ ಟಿವಿಯ ವಾಹಿನಿಗಳಲ್ಲಿ ಸಂಗೀತ ಕಛೇರಿ ನಡೆಸಿಕೊಟ್ಟ ಸಾಧನೆ ಅವರದ್ದು. ಕಣ್ಣುಮುಚ್ಚಿ ಕುಳಿತು ಮ್ಯಾಂಡೊಲಿನ್ ತಂತಿಗಳ ಮೇಲೆ ಬೆರಳುಗಳಿಂದ ಮೀಟುತ್ತಾ ಅವರು ಸಂಗೀತದ ಅಲೆಗಳನ್ನು ಸೃಷ್ಟಿಸಿದಾಗ ಸಂಗೀತ ಸರಸ್ವತಿ ಗೆಜ್ಜೆ ಕಟ್ಟಿ ಕುಣಿದ ಫೀಲಿಂಗ್ ಬರುತ್ತಿತ್ತು ಎಂದು ಅವರ ಸಹಕಲಾವಿದ, ಗಾಯಕ ಶಂಕರ್ ಮಹಾದೇವನ್ ಹೇಳಿದ್ದಾರೆ. ತಬಲಾದ ಮೇಲೆ ನನ್ನ ಬೆರಳುಗಳು ಓಡುವುದಕ್ಕಿಂತ ವೇಗವಾಗಿ ಮ್ಯಾಂಡೊಲಿನ್ ಮೇಲೆ ಅವರ ಸ್ವರ ಸಂಚಾರ ನಡೆಯುತ್ತಿತ್ತು ಎಂದು ಉಸ್ತಾದ್ ಝಾಕೀರ್ ಹುಸೇನ್ ಹೇಳಿದ್ದು ಅವರಿಗೆ ದೊರೆತ ಬಹಳ ದೊಡ್ಡ ಪ್ರಶಸ್ತಿ ಎಂದು ನನ್ನ ಭಾವನೆ.

ವಿದೇಶಗಳಲ್ಲಿ ನೂರಾರು ಸಂಗೀತ ಕಾರ್ಯಕ್ರಮಗಳು ಶ್ರೀನಿವಾಸ್ ವಿಕ್ರಮ

ಹದಿಮೂರನೇ ವಯಸ್ಸಿನಲ್ಲಿ ಜರ್ಮನಿಯ ಬರ್ಲಿನ್ ನಗರದ ಪ್ರಸಿದ್ಧ ಜಾಝ್ ಉತ್ಸವದಲ್ಲಿ ಕಛೇರಿಯನ್ನು ಕೊಟ್ಟ ಕೀರ್ತಿ ಅವರಿಗೆ ದೊರೆತಿತ್ತು. ಅಲ್ಲಿ ಅವರಿಗೆ ಆರಂಭದಲ್ಲಿ ಅರ್ಧ ಗಂಟೆ ಮಾತ್ರ ನೀಡಲಾಗಿತ್ತು. ಆದರೆ ಜನರ ಬೇಡಿಕೆಯ ಮೇಲೆ ಒಂದೂವರೆ ಗಂಟೆ ಆದರೂ ಜನರು ಸಾಕು ಅನ್ನಲೇ ಇಲ್ಲ. ಕೊನೆಗೆ ಸಿಕ್ಕಿದ್ದು ಸ್ಟ್ಯಾಂಡಿಂಗ್ ಓವೇಶನ್ ಮತ್ತು ಹಿರಿಯ ಸಂಗೀತಗಾರ ಮೈಲ್ ಡೇವಿಸ್ ಅವರ ಆಲಿಂಗನ ಮತ್ತು ಆನಂದ ಬಾಷ್ಪ.

ವಿಶ್ವವಿಖ್ಯಾತ ಜಾಝ್ ಗಿಟಾರ್ ಕಲಾವಿದರಾದ ಜಾನ್ ಮೆಕ್ಲಾಗ್ಲಿನ್ ಹಲವು ವಿಶ್ವದ ಶ್ರೇಷ್ಠ ಸಂಗೀತ ಕಲಾವಿದರನ್ನು ಒಂದೆಡೆ ಸೇರಿಸಿ REMEMBER SHAKTHI ಎಂಬ ಮ್ಯೂಸಿಕಲ್ ಟೀಮ್ ರಚನೆ ಮಾಡಿದರು. ಅದರಲ್ಲಿ ವಿಶ್ವಮಟ್ಟದ ವೆಸ್ಟರ್ನ್ ಸಂಗೀತ ಕಲಾವಿದರಾದ ಮೈಕೆಲ್ ಬ್ರೂಕ್, ಟ್ರೇ ಗನ್, ನೈಗೆಲ್ ಕೆನಡಿ ಮೊದಲಾದವರು ಇದ್ದರು. ಭಾರತದಿಂದ ತಬಲ ಲೆಜೆಂಡ್ ಝಾಕೀರ್ ಹುಸೇನ್, ಗಾಯಕ ಶಂಕರ್ ಮಹಾದೇವನ್, ವಿ. ಸೆಲ್ವಗಣೇಶ್, ಕೊಳಲು ಲೆಜೆಂಡ್ ಹರಿಪ್ರಸಾದ್ ಚೌರಾಸಿಯಾ, ಘಟಮ್ ಲೆಜೆಂಡ್ ವಿಕ್ಕು ವಿನಾಯಕ್ರಾಮ್ ಮೊದಲಾದವರು ಇದ್ದರು. ಅಂತಹ ಟೀಮಿನ ಲೀಡ್ ಕಲಾವಿದ ಎಂದರೆ ಮ್ಯಾಂಡಲಿನ್ ಶ್ರೀನಿವಾಸ್ ಅವರೇ ಎನ್ನುವಾಗಲೇ ನಮಗೆ ರೋಮಾಂಚನ ಆರಂಭವಾಗುತ್ತದೆ.

ಅಂತಹ ಕನಸಿನ ತಂಡದ ಭಾಗವಾಗಿ ಶ್ರೀನಿವಾಸ್ ಅಮೆರಿಕ, ಆಸ್ಟ್ರೇಲಿಯ, ಯುರೋಪ್, ಕೆನಡಾ, ಇಂಗ್ಲಂಡ್, ಇಟಲಿ, ಜರ್ಮನಿ, ಏಷ್ಯಾದ ಎಲ್ಲ ದೇಶಗಳ ಸಂಗೀತದ ವೇದಿಕೆಗಳಲ್ಲಿ ಮ್ಯಾಂಡೊಲಿನ್ ನುಡಿಸಿ ಇತಿಹಾಸ ಬರೆದರು. ಅವರ ಸೋದರ ರಾಜೇಶ್ ಕೂಡ ಶ್ರೀನಿವಾಸ್ ಜೊತೆಗೆ ಜುಗಲಬಂದಿ ಕಾರ್ಯಕ್ರಮ ನೀಡಿದ್ದಾರೆ. 137 ಮ್ಯೂಸಿಕಲ್ ಆಲ್ಬಂಗಳಲ್ಲಿ ಅವರು ಮ್ಯೂಸಿಕ್ ಕಂಪೋಸ್ ಮಾಡಿ ಮ್ಯಾಂಡೊಲಿನ್ ನುಡಿಸಿದ್ದಾರೆ. ಚೆನ್ನೈ ನಗರದಲ್ಲಿ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಮ್ಯೂಸಿಕ್ (SIOWM) ಸ್ಥಾಪನೆ ಮಾಡಿ ಹೊಸ ಪೀಳಿಗೆಯ ನೂರಾರು ಸಂಗೀತ ಕಲಾವಿದರನ್ನು ಅವರು ತಯಾರು ಮಾಡಿದರು. ಅವರ ಶಿಷ್ಯರು ಇಂದು ದೇಶ ವಿದೇಶಗಳಲ್ಲಿ ನೆಲೆಸಿ ಸಂಗೀತವನ್ನು ಜನಪ್ರಿಯ ಮಾಡುತ್ತಿದ್ದಾರೆ.

ಬದುಕು ದುರಂತ ಅಂತ್ಯ

ಅವರು ಸಂಗೀತದ ಮೂಲಕ ಎಷ್ಟು ಎತ್ತರಕ್ಕೆ ತಲುಪಿದರೋ ಅವರ ಖಾಸಗಿ ಬದುಕು ಅಷ್ಟೇ ದುರಂತವಾಗಿತ್ತು. ತನಗೆ ಒಲಿದ ಸಂಗೀತವು ನನ್ನ ಸಾಧನೆ ಅಲ್ಲವೇ ಅಲ್ಲ, ಅದರ ಹಿಂದೆ ನಾನು ನಂಬಿದ ಕಾಂಚಿ ಮಠಾಧೀಶರ ಮತ್ತು ಸತ್ಯಸಾಯಿ ಬಾಬಾ ಅವರ ಆಶೀರ್ವಾದ ಇದೆ ಎಂದವರು ಹೇಳಿದ್ದಾರೆ. ಅವರಿಗೆ ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ, ಸಂಗೀತ ರತ್ನ ಪ್ರಶಸ್ತಿ, ಸನಾತನ ಸಂಗೀತ ಪುರಸ್ಕಾರ, ರಾಜೀವ್ ಗಾಂಧಿ ರಾಷ್ಟ್ರೀಯ ಪ್ರಶಸ್ತಿ ಇವುಗಳೆಲ್ಲವೂ ದೊರೆತಿವೆ.

ತನ್ನ 45ನೇ ವಯಸ್ಸಿಗೆ ಅವರು ಪಿತ್ತಕೋಶದ ಸೋಂಕಿನಿಂದ ನಿಧನರಾದಾಗ ಇಡೀ ಸಂಗೀತ ಜಗತ್ತು ಒಮ್ಮೆ ಸ್ತಬ್ಧವಾಗಿತ್ತು.

ಆದರೆ ಅವರು ನೂರು ವರ್ಷಗಳ ಬದುಕಿನಲ್ಲಿ ಸಾಧಿಸಬೇಕಾದದ್ದನ್ನು ಕಿರಿಯ ವಯಸ್ಸಿನಲ್ಲಿಯೇ ಸಾಧಿಸಿ ನಿರ್ಗಮಿಸಿದ್ದಾರೆ ಎನ್ನುವುದು ಒಂದು ನೆಮ್ಮದಿ. ಭಾರತದ ಓರ್ವ ಮಹಾನ್ ಸಂಗೀತ ಕಲಾವಿದ ತನ್ನ ಮ್ಯಾಂಡೊಲಿನ್ ಎಂಬ ಪುಟ್ಟ ವಾದ್ಯದ ಮೂಲಕ ಪೂರ್ವ ಹಾಗೂ ಪಶ್ಚಿಮ ಎರಡನ್ನೂ ಬೆಸೆದರಲ್ಲಾ ಎಂಬ ಹೆಮ್ಮೆ.

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top