ಆಚರಣೆಗೆ ಅವಕಾಶ ಕೊಡಲ್ಲ ಎಂದು ಪ್ರತಾಪ್ ಸಿಂಹ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ದಸರಾ ಹಬ್ಬದ ಸಂಭ್ರಮಕ್ಕೆ ಸಿದ್ಧವಾಗುತ್ತಿರುವಂತೆಯೇ ಮತ್ತೆ ಮಹಿಷ ದಸರಾದ ಕಿರಿಕ್ ಶುರುವಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಮಹಿಷ ದಸರಾ ಆಚರಿಸಲು ಕೆಲವರು ಮುಂದಾಗಿದ್ದು, ಇದಕ್ಕೆ ಇನ್ನೊಂದೆಡೆಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮೈಸೂರಿನಲ್ಲಿ ದಸರಾ ಸಂಭ್ರಮ ಆರಂಭವಾಗಲು ಇನ್ನು ಒಂದು ವಾರ ಮಾತ್ರ ಬಾಕಿ ಇರುವಾಗ ಮಹಿಷ ದಸರಾ ವಿಚಾರವೂ ಮುನ್ನೆಲೆಗೆ ಬಂದಿದೆ. ಸೆಪ್ಟೆಂಬರ್ 29ರಂದು ಮಹಿಷ ದಸರಾ ಮಾಡುತ್ತೇವೆ ಅಂತ ಮಹಿಷ ದಸರಾ ಆಚರಣ ಸಮಿತಿ ಹೇಳಿದೆ.
ಚಾಮುಂಡಿ ಬೆಟ್ಟದ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಮಹಿಷ ದಸರಾ ಮಾಡುತ್ತೇವೆ. ಅಲ್ಲದೇ ಈ ಬಾರಿಯಿಂದ ಮಹಿಷಾ ದಸರಾ ಬದಲು `ಮಹಿಷ ಮಂಡಲೋತ್ಸವ’ ಎಂದು ಹೊಸ ಹೆಸರು ಇಟ್ಟಿದ್ದೇವೆ ಅಂತ ಹೇಳಿದೆ.
ಮಹಿಷ ದಸರಾಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲಿಂದಲೂ ಮಹಿಷ ದಸರಾಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಯಾವುದೇ ಕಾರಣಕ್ಕೂ ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಮಾಡಲು ಬಿಡಲ್ಲ. ಒಂದು ವೇಳೆ ಅವರು ಅಲ್ಲೇ ಆಚರಿಸಲು ಹೊರಟರೆ ನಾವು ಕೂಡ ಚಾಮುಂಡಿ ಚಲೋ ಮಾಡ್ತಿವಿ. ನಾವಾ ಅವರ ನೋಡೇಬಿಡೋಣಾ ಅಂತ ಸವಾಲು ಹಾಕಿದ್ದಾರೆ.