ಪ್ರಾಸಿಕ್ಯೂಷನ್ ಆದೇಶ ಎತ್ತಿಹಿಡಿದರೆ ಸಿಎಂಗೆ ಶುರುವಾಗಲಿದೆ ಸಂಕಷ್ಟಗಳ ಸರಮಾಲೆ
ಬೆಂಗಳೂರು: ಮುಡಾ ಹಗರಣದ ಸುಳಿಗೆ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೇಸ್ ಇಂದು ಹೈಕೋರ್ಟ್‌ನಲ್ಲಿ ಇತ್ಯರ್ಥವಾಗುವ ಸಾಧ್ಯತೆಯಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ತೀರ್ಪು ಇಂದು ಪ್ರಕಟವಾಗಲಿದ್ದು, ಸಿದ್ದರಾಮಯ್ಯನವರ ಭವಿಷ್ಯದ ನಿಟ್ಟಿನಲ್ಲಿ ಇದು ನಿರ್ಣಾಯಕ ತೀರ್ಪು ಆಗಲಿದೆ. ಹೀಗಾಗಿ ಈ ಪ್ರಕರಣ ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಕುತೂಹಲ ಕೆರಳಿಸಿದೆ.
ಪತ್ನಿಯ ಹೆಸರಿನಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ 14 ಸೈಟ್‌ಗಳನ್ನು ಪಡೆದಿರುವ ಆರೋಪ ಈಗ ಸಿದ್ದರಾಮಯ್ಯನವರಿಗೆ ಸಂಕಷ್ಟ ತಂದಿಟ್ಟಿದೆ. ಸಾವಿರಾರು ಪುಟಗಳ ದಾಖಲೆ, 6 ದಿನಗಳ ಸುದೀರ್ಘ ವಾದ ಮಂಡನೆ ಆಲಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಇಂದು ಮಧ್ಯಾಹ್ನ 12 ಗಂಟೆಗೆ ತೀರ್ಪು ಪ್ರಕಟಿಸಲಿದೆ.
ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದರೆ ಸಿದ್ದರಾಮಯ್ಯ ನಿರಾಳರಾಗಬಹುದು. ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಯೇನೂ ಆಗದು.
ಒಂದು ವೇಳೆ ಹೈಕೋರ್ಟ್ ರಾಜ್ಯಪಾಲರ ಆದೇಶ ಎತ್ತಿಹಿಡಿದರೆ ಮಾತ್ರ ಸಿದ್ದರಾಮಯ್ಯನವರ ಸಂಕಷ್ಟ ಹೆಚ್ಚಾಗಲಿದೆ. ಸಿದ್ದರಾಮಯ್ಯ ವಿರುದ್ಧವಿರುವ ಖಾಸಗಿ ದೂರುಗಳಿಗೆ ಮತ್ತೆ ಜೀವ ಬರಲಿದೆ. ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆಗೆ ಆದೇಶಿಸುವ ಸಾಧ್ಯತೆಯಿದೆ. ಒಂದು ವೇಳೆ ಸಿಎಂ ವಿರುದ್ಧ ಎಫ್ಐಆರ್ ದಾಖಲಾದರೆ ರಾಜೀನಾಮೆ ಒತ್ತಡ ಹೆಚ್ಚಾಗಲಿದೆ. ಪ್ರತಿಪಕ್ಷಗಳು ಕೂಡ ಸಿಎಂ ರಾಜೀನಾಮೆಗೆ ಪಟ್ಟು ಹಿಡಿಯಲಿವೆ. ಇದು ಸಿದ್ದರಾಮಯ್ಯ ಮಾತ್ರವಲ್ಲ ಸರಕಾರದ ಮೇಲೂ ಪರಿಣಾಮ ಬೀರಲಿದೆ.
ಈ ನಡುವೆ ಸಿದ್ದರಾಮಯ್ಯ ಯಾವಾಗ ರಾಜೀನಾಮೆ ಕೊಡುತ್ತಾರೆ ಎಂದು ಕಾಂಗ್ರೆಸ್‌ನವರೇ ಕಾಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಿದ್ದರೂ ಅಚ್ಚರಿ ಪಡಬೇಕಿಲ್ಲ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕುಟುಕಿದ್ದಾರೆ.