ಪಾದುಕಾ ಪ್ರದಾನ ಪ್ರಸಂಗದಂತೆ ರಾಜ್ಯಭಾರ ಮಾಡುತ್ತೇನೆ ಎಂದು ಹೇಳಿದ ನೂತನ ಸಿಎಂ
ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿ ನಡೆದ ನಾಟಕೀಯ ಬೆಳವಣಿಗೆಗಳಿಂದಾಗಿ ದಿಲ್ಲಿ ಮುಖ್ಯಮಂತ್ರಿಯಾಗಿರುವ ಆತಿಷಿ ಸಿಂಗ್ ಮರ್ಲೆನಾ ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಆದರೆ ಅವರು ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕುಳಿತುಕೊಳ್ಳುತ್ತಿದ್ದ ಕುರ್ಚಿಯಲ್ಲಿ ಕುಳಿತುಕೊಂಡಿಲ್ಲ. ಬದಲಾಗಿ ಮುಖ್ಯಮಂತ್ರಿ ಕುರ್ಚಿ ಪಕ್ಕದಲ್ಲೇ ಬೇರೆ ಕುರ್ಚಿ ಹಾಕಿಕೊಂಡು ಕುಳಿತು ಅಧಿಕಾರ ಚಲಾಯಿಸುತ್ತಿರುವ ಫೋಟೋ ಭಾರಿ ವೈರಲ್ ಆಗಿದೆ.
ಮುಖ್ಯಮಂತ್ರಿ ಎಂದಿಗಾದರೂ ಕೇಜ್ರಿವಾಲ್ ತಾನು ಅವರ ಆದೇಶ ಪಾಲಕಿ ಮಾತ್ರ ಎಂಬುದನ್ನು ಮರ್ಲಿನಾ ಸಾಂಕೇತಿಕವಾಗಿ ಈ ರೀತಿ ತೋರಿಸಿದ್ದಾರೆ. ಆದರೆ ಈ ಕ್ರಮ ದೇಶಾದ್ಯಂತ ಚರ್ಚೆಗೀಡಾಗಿದೆ.
ಅಧಿಕಾರ ಸ್ವೀಕಾರ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಮರ್ಲೆನಾ ತನ್ನ ಪರಿಸ್ಥಿತಿಯನ್ನು ರಾಮಾಯಣದ ಪಾದುಕಾ ಪ್ರದಾನ ಪ್ರಸಂಗಕ್ಕೆ ಹೋಲಿಸಿಕೊಂಡಿದ್ದಾರೆ.
ರಾಮನ ಅನುಪಸ್ಥಿತಿಯಲ್ಲಿ ಅವನ ಪಾದುಕೆಯನ್ನಿಟ್ಟು ರಾಜ್ಯಭಾರ ಮಾಡಿದ ಭರತನಂತೆ ತಾನು ಎಂದು ಮರ್ಲೆನಾ ಹೇಳಿಕೊಂಡಿದ್ದಾರೆ. ನಾನೀಗ ಭರತನ ಸ್ಥಾನದಲ್ಲಿದ್ದೇನೆ. ಮುಖ್ಯಮಂತ್ರಿ ಪಟ್ಟ ಎಂದಿಗಾದರೂ ಕೇಜ್ರಿವಾಲ್‌ಗೆ ಮೀಸಲು. ಮುಂದಿನ ನಾಲ್ಕು ತಿಂಗಳು ಅದೇ ದ್ಯೇಯದಲ್ಲಿ ಅಧಿಕಾರ ನಡೆಸಲಿದ್ದೇನೆ ಎಂದು ಮರ್ಲೆನಾ ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ದಿಲ್ಲಿಯ ಜನತೆ ಕೇಜ್ರಿವಾಲ್ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿ ಆರಿಸುವುದು ಖಚಿತ. ಹೀಗಾಗಿ ನಾಲ್ಕು ತಿಂಗಳು ಭರತನಂತೆ ರಾಜ್ಯಭಾರ ಮಾಡುವುದಷ್ಟೇ ತನ್ನ ಕೆಲಸ ಎಂದಿದ್ದಾರೆ.