ಶಾಂತಿಹೋಮ, ಪಂಚಗವ್ಯ ಸಂಪ್ರೋಕ್ಷಣೆ ಮೂಲಕ ಶುದ್ಧೀಕರಣ
ತಿರುಪತಿ: ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ತಿರುಮಲದ ಪ್ರಸಿದ್ಧ ವೆಂಕಟೇಶ್ವರ ದೇವಾಲಯದ ಲಡ್ಡುವಿನಲ್ಲಿ ಪ್ರಾಣಿಜನ್ಯ ಕೊಬ್ಬಿನಂಶ ಬಳಸಲಾಗಿದೆ ಎಂಬ ವಿಚಾರ ಬಹಿರಂಗವಾದ ಬಳಿಕ ಭಕ್ತರ ಮನಸ್ಸಿನಲ್ಲಿ ಉಂಟಾದ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ (ಟಿಟಿಡಿ) ಹಲವಾರು ಧಾರ್ಮಿಕ ಕಾರ್ಯಗಳನ್ನು ಮಾಡಲು ನಿರ್ಧರಿಸಿದೆ. ಕ್ಷೇತ್ರದ ಪಾವಿತ್ರ್ಯಕ್ಕೆ ಆಗಿರುವ ಅಪಚಾರಕ್ಕೆ ಪ್ರಾಯಶ್ಚಿತ್ತ ಮಾಡಿಕೊಂಡು ಕ್ಷೇತ್ರವನ್ನು ಶುದ್ಧೀಕರಿಸುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ದೇವಾಲಯದಲ್ಲಿ ಶಾಂತಿಹೋಮ, ಧಾರ್ಮಿಕ ವಿಧಿಗಳು ಆರಂಭವಾಗಿವೆ.
ನಾಲ್ಕು ಗಂಟೆಗಳ ಕಾಲ ಶಾಂತಿಹೋಮ, ಪಂಚಗವ್ಯ ಪ್ರೊಕ್ಷಣೆ ಶುದ್ಧೀಕರಣ ಕಾರ್ಯ ನಡೆಸಲಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ. ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಆಶ್ರಯದಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೂ ಶಾಂತಿ ಹೋಮ ಪಂಚಗವ್ಯ ಪ್ರೋಕ್ಷಣೆ ನಡೆಸಲಾಗಿದೆ. ಸಂಜೆಯವರೆಗೂ ಇನ್ನೂ ಹಲವು ಧಾರ್ಮಿಕ ಶುದ್ಧೀಕರಣ ಕಾರ್ಯಗಳು ನಡೆಯಲಿವೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ.
ತಿಮ್ಮಪ್ಪನ ಭಕ್ತರಲ್ಲಿ ನಂಬಿಕೆ ಮೂಡಿಸಲು ಬಂಗಾರು ಬಾವಿ ಯಾಗಶಾಲೆಯಲ್ಲಿ ಹೋಮ ನಡೆಸಲಾಗಿದೆ. ವಾಸ್ತುಶುದ್ಧಿ, ಯಂತ್ರಶುದ್ಧಿ, ಸ್ಥಳಶುದ್ಧಿ, ಅನ್ನಪ್ರಸಾದ ತಯಾರಾಗುವ ಸ್ಥಳ, ಲಡ್ಡು ತಯಾರಾಗುವ ಸ್ಥಳ, ತುಪ್ಪ ಬಳಸುತ್ತಿದ್ದ ಎಲ್ಲ ಸ್ಥಳಗಳಲ್ಲಿ ಪಂಚಗವ್ಯ ಸಂಪ್ರೋಕ್ಷಣೆ ಮುಂತಾದ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಗಿದೆ.
ಈ ನಡುವೆ ತಿರುಮಲ ತಿರುಪತಿ ದೇವಸ್ಥಾನದಲ್ಲಿ ತುಪ್ಪ ಖರೀದಿಗೆ ಇದ್ದ ನಿಯಮಗಳ ಬದಲಾವಣೆ ಸೇರಿದಂತೆ ಅಕ್ರಮಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗುವುದು. ತುಪ್ಪ ಖರೀದಿಗೆ ಇದ್ದ ಹಲವು ನಿಯಮಗಳನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ಬದಲಾಗಿಸಲಾಗಿತ್ತು ಎಂದು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.