ಮೂರು ದಿನ ಉಪವಾಸ, ಮೌನವ್ರತ ಕೈಗೊಳ್ಳಲಿರುವ ಶ್ರೀಗಳು
ಬೆಂಗಳೂರು: ತಿರುಪತಿ ಲಡ್ಡು ಪ್ರಸಾದದಲ್ಲಿ ದನ ಮತ್ತು ಮೀನಿನ ಕೊಬ್ಬಿನಂಶ ಸೇರಿಸಿ ಅಪವಿತ್ರಗೊಳಿಸಿರುವುದಕ್ಕೆ ಪ್ರಾಯಶ್ಚಿತ್ತವಾಗಿ ಮತ್ತು ಅಪವಿತ್ರ ಶುದ್ಧಿಗಾಗಿ ಜನರು ಮೂರು ದಿನ ಉಪವಾಸ, ಮೌನವ್ರತ ಕೈಗೊಳ್ಳಬಹುದು ಎಂದು ಶೃಂಗೇರಿ ಮಹಾಸಂಸ್ಥಾನದ ಶ್ರೀ ಅಭಿನವ ಶಂಕರಭಾರತಿ ಮಹಾಸ್ವಾಮಿಗಳು ಸಲಹೆ ನೀಡಿದ್ದಾರೆ. ಸ್ವಾಮೀಜಿಗಳು ಸ್ವತಹ ಮೂರು ದಿನ ಉಪವಾಸ ಮತ್ತು ಮೌನವ್ರತ ಕೈಗೊಳ್ಳುವ ಸಂಕಲ್ಪ ಮಾಡಿದ್ದಾರೆ.
ತಿರುಪತಿ ತಿಮ್ಮಪ್ಪನ ಲಡ್ಡುಗೆ ಪ್ರಾಣಿಗಳ ಕೊಬ್ಬಿನಂಶ ಹಾಗೂ ಮೀನಿನ ಎಣ್ಣೆ ಬೆರೆಸಿ ಕ್ಷೇತ್ರವನ್ನು ಅಪವಿತ್ರಗೊಳಿಸಿದ ವಿಚಾರ ಬಯಲಾದ ಬಳಿಕ ದೇಶಾದ್ಯಂತ ಕೋಲಾಹಲ ಉಂಟಾಗಿದೆ. ಪ್ರತಿವರ್ಷ ಕೋಟಿಗಟ್ಟಲೆ ಭಕ್ತರು ಭೇಟಿ ನೀಡುವ ಕ್ಷೇತ್ರವನ್ನು ವ್ಯವಸ್ಥಿತವಾಗಿ ಅಪವಿತ್ರಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕ್ಷೇತ್ರಕ್ಕಾಗಿರುವ ಅಪವಿತ್ರ ಮತ್ತು ದೇಶದ ಜನರಿ ಧಾರ್ಮಿಕ ನಂಬಿಕೆಗೆ ಆಗಿರುವ ಘಾಸಿಗೆ ಪ್ರಾಯಶ್ಚಿತ್ತವಾಗಿ ವ್ರತ ಕೈಗೊಂಡಿದ್ದಾರೆ.
ಇದರ ಬೆನ್ನಿಗೆ ಶೃಂಗೇರಿ ಶ್ರೀಗಳು ಅಪವಿತ್ರ ಶುದ್ಧಿಗಾಗಿ ಮೂರು ದಿನಗಳ ಕಾಲ ಉಪವಾಸ ಹಾಗೂ ಮೌನ ವ್ರತ ಕೈಗೊಳ್ಳಲಿದ್ದಾರೆ. ಕ್ಷೇತ್ರಕ್ಕೆ ಆಗಿರುವ ಅಪಚಾರಕ್ಕೆ ಸಾರ್ವಜನಿಕರು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಶ್ರೀಗಳು ಕರೆ ನೀಡಿದ್ದಾರೆ. ಪುರೋಹಿತರ ಅಗತ್ಯವಿಲ್ಲದೆ ಸಾರ್ವಜನಿಕರು ಮನೆಯಲ್ಲಿಯೇ ಮೂರು ರೀತಿಯ ಸರಳ ಪ್ರಾಯಶ್ಚಿತ್ತ ವಿಧಾನ ಮಾಡಿಕೊಳ್ಳುವ ವಿಧಾನವನ್ನು ಶ್ರೀಗಳು ಸೂಚಿಸಿದ್ದಾರೆ.