ಹೈದರಾಬಾದ್: ತಿರುಪತಿ ದೇವಳದ ಲಡ್ಡು ಪ್ರಸಾದದಲ್ಲಿ ದನದ ಮತ್ತು ಮೀನಿನ ಕೊಬ್ಬು ಸೇರಿಸಲಾಗಿದೆ ಎಂಬ ವಿಚಾರ ಬಯಲಾಗಿ ಕೋಲಾಹಲ ಉಂಟಾದ ಬೆನ್ನಿಗೆ ಲಡ್ಡು ಪ್ರಸಾದಕ್ಕೆ ಬಳಸುವ ತುಪ್ಪದ ಗುಣಮಟ್ಟ ಪರೀಕ್ಷಿಸಲು ದೇವಸ್ಥಾನದ ಆಡಳಿತ ಮಂಡಳಿ ಸಮಿತಿಯೊಂದನ್ನು ರಚಿಸಿದೆ.
ಡಾ.ಸುರೇಂದ್ರನಾಥ್, ಡಾ.ವಿಜಯ್ ಭಾಸ್ಕರ್ ರೆಡ್ಡಿ, ಡಾ.ಸ್ವರ್ಣಲತಾ ಮತ್ತು ಡಾ.ಮಹದೇವನ್ ಅವರನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಜೆ.ಶ್ಯಾಮಲಾ ರಾವ್ ತಿಳಿಸಿದ್ದಾರೆ.
ಟೆಂಡರ್‌ಗಳಲ್ಲಿ ಗುಣಮಟ್ಟದ ತುಪ್ಪವನ್ನು ಖರೀದಿಸಲು ಸೇರಿಸಬೇಕಾದ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ಸಮಿತಿಯು ಸಲಹೆ ನೀಡಲಿದೆ. ಗುತ್ತಿಗೆದಾರರು ಕಲಬೆರಕೆ ಮತ್ತು ಕಡಿಮೆ ಗುಣಮಟ್ಟದ ತುಪ್ಪವನ್ನು ಸರಬರಾಜು ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ಪ್ರಸಿದ್ಧ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆರೋಪಿಸಿದ್ದರು. ಇದು ಬಳಿಕ ಲ್ಯಾಬ್ ಪರೀಕ್ಷೆಯಲ್ಲಿ ದೃಢಪಟ್ಟು ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗೆ ಘಾಸಿಯಾಗಿದೆ.