ತುಪ್ಪದಲ್ಲಿ ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು, ಹಂದಿಯ ಕೊಬ್ಬು, ಪಾಮಾಯಿಲ್, ಸೋಯಾಬಿನ್, ಸೂರ್ಯಕಾಂತಿ ಎಣ್ಣೆ, ಮೆಕ್ಕೆಜೋಳ ಎಣ್ಣೆ ಬೆರಕೆ
ತಿರುಪತಿ: ಪ್ರಾಣಿಗಳ ಕೊಬ್ಬು ಬಳಸಿ ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆ ಮಾಡಲಾಗುತ್ತಿದೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾಡಿದ ಆರೋಪ ನಿಜ ಎನ್ನುವುದು ಲ್ಯಾಬ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ನಾಯ್ಡು ಹೇಳಿಕೆ ನಿನ್ನೆ ಇಡೀ ದೇಶದಲ್ಲಿ ಸಂಚಲನ ಉಂಟುಮಾಡಿತ್ತು. ತಿರುಪತಿ ತಿಮ್ಮಪ್ಪನ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಯ ಜೊತೆಗೆ ಹಿಂದಿನ ಆಂಧ್ರ ಪ್ರದೇಶ ಸರಕಾರ ಚೆಲ್ಲಾಟವಾಡಿದ್ದು ಭಾರಿ ಆಕ್ರೋಶಕ್ಕೂ ಕಾರಣವಾಗಿದೆ.
ಪ್ರಾಣಿಗಳ ಕೊಬ್ಬು ಬಳಸಿ ಲಡ್ಡು ತಯಾರಿಸಿದ್ದಾಗಿ ಟಿಟಿಡಿಯಿಂದ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಅಧಿಕೃತ ಸ್ಪಷ್ಟನೆ ನೀಡಲಾಗಿದೆ. ಲ್ಯಾಬ್ ವರದಿ ಬಿಡುಗಡೆ ಮಾಡಿ ಟಿಟಿಡಿ ಆಡಳಿತ ಮಂಡಳಿಯಿಂದ ಸ್ಪಷ್ಟನೆ ನೀಡಲಾಗಿದೆ. ತಿರುಪತಿಯ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು ಇರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ. ಇದರಲ್ಲಿ ಹಂದಿಯ ಕೊಬ್ಬು, ದನದ ಕೊಬ್ಬು, ಪಾಮಾಯಿಲ್, ಸೋಯಾಬಿನ್, ಸೂರ್ಯಕಾಂತಿ ಎಣ್ಣೆ, ಮೆಕ್ಕೆಜೋಳ ಎಣ್ಣೆ ಬೆರೆಸಿದ ಕಡಿಮೆ ಗುಣಮಟ್ಟದ ತುಪ್ಪ ಬಳಕೆ ಮಾಡಲಾಗುತ್ತಿದೆ ಎಂದು ಖಚಿತವಾಗಿದೆ.
ತಿರುಪತಿ ಲಡ್ಡುವನ್ನು ತಿರುಪತಿಯ ತಿರುಮಲ ವೆಂಕಟೇಶ್ವರ ಸ್ವಾಮಿಯ ಪವಿತ್ರ ಪ್ರಸಾದ ಎಂಬ ನಂಬಿಕೆಯಿಂದ ಭಕ್ತರು ಸೇವಿಸುತ್ತಾರೆ. ಇದಕ್ಕೆ ಭಾರಿ ಬೇಡಿಕೆಯೂ ಇದೆ. ತಿರುಪತಿಗೆ ನಿತ್ಯ ಭೇಟಿ ನೀಡುವ ಲಕ್ಷಗಟ್ಟಲೆ ಭಕ್ತರು ಸಾಧ್ಯವಾದಷ್ಟು ಲಡ್ಡು ಖರೀದಿಸಿ ತಂದು ಊರಲ್ಲೂ ತಿರುಪತಿಯ ಪ್ರಸಾದ ಎಂದು ಹಂಚುವ ಕ್ರಮ ಇದೆ. ಈಗ ಈ ಪ್ರಸಾದವೇ ಪ್ರಾಣಿಜನ್ಯ ಅಂಶದಿಂದ ಕೂಡಿದೆ ಎಂಬ ಸುದ್ದಿ ಅನೇಕರನ್ನು ಘಾಸಿಗೊಳಿಸಿದೆ.
ತಿರುಪತಿಯ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಲಡ್ಡುಗಳನ್ನು ಪ್ರಸಾದವಾಗಿ ವಿತರಿಸಲು ಗೋಮಾಂಸ ಟ್ಯಾಲೋ, ಮೀನಿನ ಎಣ್ಣೆ ಮತ್ತು ಪಾಮ್ ಆಯಿಲ್ ಅನ್ನು ಬಳಸಲಾಗುತ್ತಿದೆ ಎಂದು ಲ್ಯಾಬ್ ಪರೀಕ್ಷೆಯ ವರದಿ ಬಹಿರಂಗಪಡಿಸಿದೆ.
ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ಪ್ರಸಿದ್ಧ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಬುಧವಾರ ಆರೋಪಿಸಿದ್ದರು. ಆದರೆ, ವೈಎಸ್‌ಆರ್‌ಸಿಪಿ ಈ ಆರೋಪವನ್ನು ತಳ್ಳಿ ಹಾಕಿತ್ತು.
ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡು ಪ್ರಸಾದವನ್ನು ತಯಾರಿಸಲು ಬಳಸುತ್ತಿದ್ದ ತುಪ್ಪದಲ್ಲಿ ಗೋಮಾಂಸ ಟ್ಯಾಲೋ ಮತ್ತು ಮೀನಿನ ಎಣ್ಣೆ ಸೇರಿದಂತೆ ಪ್ರಾಣಿಗಳ ಕೊಬ್ಬಿನ ಕುರುಹುಗಳಿವೆ ಎಂದು ವರದಿಯು ತನ್ನ ಸಂಶೋಧನೆಗಳಲ್ಲಿ ಬಹಿರಂಗಪಡಿಸಿದೆ.
ಕೆಎಂಎಫ್ ಸ್ಪಷ್ಟನೆ
ತಿರುಪತಿ ಲಡ್ಡು ತಯಾರಿಸಲು ಕರ್ನಾಟಕದಿಂದ ಸರಬರಾಜು ಮಾಡಲಾಗುತ್ತಿರುವ ನಂದಿನ ತುಪ್ಪವನ್ನು ಬಳಕೆ ಮಾಡಲಾಗುತ್ತದೆ. ಈ ಆರೋಪದ ಬಗ್ಗೆ ಕೆಎಂಎಫ್ ಒಕ್ಕೂಟದ ಅಧ್ಯಕ್ಷ ಭೀಮಾ ನಾಯ್ಕ್ ಪ್ರತಿಕ್ರಿಯಿಸಿದ್ದು, ನಮ್ಮ ನಂದಿನಿ ಬ್ರ್ಯಾಂಡ್‌ನಲ್ಲಿ ಅಂತಹ ಯಾವುದೇ ಅಂಶಗಳಿಲ್ಲ ಎಂದು ಹೇಳಿದ್ದಾರೆ.
ಕಳೆದ 4 ವರ್ಷಗಳಿಂದ ನಂದಿನಿ ತುಪ್ಪ ಅಲ್ಲಿಗೆ ಹೋಗಿಲ್ಲ. ಈಗ ನಂದಿನಿ ತುಪ್ಪ ತಿರುಪತಿಗೆ ಸರಬರಾಜು ಮಾಡಲು ಶುರು ಮಾಡಿದ್ದೇವೆ. 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 3 ರಿಂದ 4 ಮೆಟ್ರಿಕ್ ಟನ್ ತುಪ್ಪ ಸರಬರಾಜು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
2019ರಲ್ಲಿ ಸಮ್ಮಿಶ್ರ ಸರ್ಕಾರ ಇತ್ತು. ಆ ವರ್ಷ 17 ಟನ್ ಸರಬರಾಜು ಮಾಡಿದ್ದೇವೆ. 2020-24ರವರೆಗೆ ಟಿಟಿಡಿಯವರು ನಂದಿನಿ ತುಪ್ಪ ಸ್ಥಗಿತ ಮಾಡಿದ್ದರು. ಇಲ್ಲಿ ಹೊಸ ಸರ್ಕಾರ ಬಂದ ಮೇಲೆ ಟ್ರಸ್ಟ್ನ ಅಧಿಕಾರಿಗಳು ನಂದಿನಿ ತುಪ್ಪವನ್ನು ಹೊರಗಿಟ್ಟು ಬೇರೆ ಬೇರೆ ಬ್ರ್ಯಾಂಡ್ ತುಪ್ಪವನ್ನ ಖರೀದಿ ಮಾಡಿದ್ದಾರೆ. ಇದರ ಹಿನ್ನಲೆ ಏನು ಅಂತ ತನಿಖೆ ಮಾಡುತ್ತೇವೆ. ಭ್ರಷ್ಟಾಚಾರ ನಡೆದಿದೆ ಅಂತ ಈಗಿನ ಸಿಎಂ ಗಮನಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ.
ಟಿಟಿಡಿ ಹೊಸ ಅಧ್ಯಕ್ಷರು, ನಿರ್ದೇಶಕರೆಲ್ಲ ಸೇರಿ ನಂದಿನಿ ತುಪ್ಪ ಬೇಕು ಅಂತ ಮೇಲ್ ಮಾಡಿದ್ದರು. ಈ ಬಾರಿ ಟೆಂಡರ್ನಲ್ಲಿ ಭಾಗವಹಿಸಲು ಹೇಳಿದ್ದರು. ಹೀಗಾಗಿ 3 ಲಕ್ಷದ 50 ಸಾವಿರ ಕೆ.ಜಿ ತುಪ್ಪವನ್ನ ಟೆಂಡರ್ ತೆಗೆದುಕೊಂಡಿದ್ದೇವೆ. ಮೊದಲ ಹಂತದಲ್ಲಿ 350 ಮೆಟ್ರಿಕ್ ಟನ್ ತುಪ್ಪವನ್ನು ಕಳೆದ ವಾರ ಸರಬರಾಜು ಮಾಡಿದ್ದೇವೆ ಎಂದಿದ್ದಾರೆ.
ಇಡೀ ದೇಶದಲ್ಲೇ ಗ್ರಾಹಕರ ನಂಬಿಕೆ ಬ್ರ್ಯಾಂಡ್ ನಂದಿನಿ. ನಂದಿನಿ ತುಪ್ಪ ಬಹಳ ಕ್ವಾಲಿಟಿಯಾಗಿದೆ. ಮನೆಯಲ್ಲಿ ಮಾಡಿದ ರೀತಿಯೇ ಇರುತ್ತೆ. ಕಳಪೆ ತುಪ್ಪ ಬಳಕೆ ಮಾಡಿದ್ದಾರೆ ಅಂತ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಅವರೇ ತನಿಖೆ ಮಾಡಿಸಿದರೆ ಸತ್ಯಾಸತ್ಯತೆ ಹೊರಬರಲಿದೆ. ಎಫ್ಎಸ್ಎಲ್ಗೆ ಕಳುಹಿಸಿ ವರದಿ ಪಡೆಯುತ್ತಾರೆ. ಅಲ್ಲಿನ ಸರ್ಕಾರವೇ ಅದನ್ನು ನಿಭಾಯಿಸುತ್ತೆ ಎಂದಿದ್ದಾರೆ.