ಪುತ್ತೂರು : ಕಾಂಗ್ರೆಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಬ್ಲಾಕ್ ಹಾಗೂ ವಿಟ್ಲ – ಉಪ್ಪಿನಂಗಡಿ ಬ್ಲಾಕ್ ನ ಬೂತ್ ಅಧ್ಯಕ್ಷರ – ಬಿ.ಎಲ್.ಎ. ಗಳ ತರಬೇತಿ ಶಿಬಿರ ನಗರದ ಪುರಭವನದಲ್ಲಿ ಮಂಗಳವಾರ ನಡೆಯಿತು.
ರಾಷ್ಟ್ರಗೀತೆಯೊಂದಿಗೆ ಆರಂಭಗೊಂಡ ತರಬೇತಿ ಶಿಬಿರವನ್ನು ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ನಡೆದ ತರಬೇತಿ ಶಿಬಿರದಲ್ಲಿ ತರಬೇತುದಾರ ಎಂ.ಜಿ.ಹೆಗಡೆ ತರಬೇತು ನೀಡಿ, ಬದಲಾವಣೆ ಜಗದ ನಿಯಮವಾಗಿದ್ದು, ಸಾಮಾಜಿಕ, ರಾಜಕೀಯವಾಗಿ ಬದಲಾವಣೆಗಳು ನಡೆಯುತ್ತಾ ಇರುತ್ತವೆ. ರಾಜಕೀಯ ಪಕ್ಷದ ಬೆಳವಣಿಗೆ, ಅಭಿವೃದ್ಧಿ ಬಗ್ಗೆ ಪ್ರಶ್ನೆಗಳು ರಾಜಕೀಯ ನಾಯಕರ ಮುಂದಿರುವುದು ಸಹಜ. ಇದಕ್ಕೆ ಉತ್ತರ ನೀಡಬೇಕಾಗುತ್ತದೆ. ಹಳೆಯ ಸಿದ್ಧಾಂತದಿಂದ ಹೊಸತನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಹೊಸ ಸಿದ್ದಾಂತಕ್ಕೆ ನಮ್ಮನ್ನು ಸಿದ್ಧಡಿಸಿಕೊಳ್ಳಬೇಕಾಗುತ್ತದೆ ಎಂದರು.
ರಾಜಕೀಯವಾಗಿ ಎರಡು ವಿಭಾಗಗಳಿದ್ದು, ಒಂದು ಸಂಘಟನೆ, ಇನ್ನೊಂದು ಶಕ್ತಿಯುತ ಪಾಲಿಟಿಕ್ಸ್. ಎಐಸಿಸಿ, ಕೆಪಿಸಿಸಿ, ಬೂತ್ ಸಂಘಟನೆಯಾದರೆ, ಚುನಾಯಿತರಾಗಿ ಆಯ್ಕೆಯಾದ ಎಂಎಲ್ಎ, ಎಂಪಿ ಮುಂತಾದವುಗಳು ಶಕ್ತಿ ರಾಜಕೀಯ. ಈ ಎರಡೂ ವಿಭಾಗಗಳನ್ನು ಮಿಶ್ರ ಮಾಡಿದರೆ ಸೋಲು ಖಂಡಿತಾ. ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಲು ಇವೆರಡರ ಮಧ್ಯೆ ರೇಖೆ ಎಳೆಯಬೇಕಾದ ಅಗತ್ಯವಿದೆ ಎಂದ ಅವರು, ಸಂಘಟನೆ ಎಂದರೆ ಸಂಪರ್ಕ, ಸಂವಹನದಿಂದ ಕೂಡಿರಬೇಕು. ಇಲ್ಲಿ ಪಕ್ಷ ಮೊದಲು, ಆಮೇಲೆ ಜನಪ್ರತಿನಿಧಿ. ಮೊದಲು ಜನಪ್ರತಿನಿಧಿಯಾದರೆ ಚುನಾವಣೆಯಲ್ಲಿ ಯಶಸ್ಸು ಗಳಿಸಲು ಅಸಾಧ್ಯ ಎಂದು ವಿವರಿಸಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಪುತ್ತೂರು ಕಾಂಗ್ರೆಸ್ ನ ಜಿಲ್ಲಾ ವಕ್ತಾರ ಮಹಮ್ಮದ್ ಬಡಗನ್ನೂರು, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದಾಲಿ , ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಕಾಂಗ್ರೆಸ್ ಮುಖಂಡರಾದ ಕಾವು ಹೇಮನಾಥ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ,ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಅಶೋಕ್ ಕುಮಾರ್ ರೈ, ಡಿಸಿಸಿ ಸದಸ್ಯೆ ಕೃಪಾ ಅಮರ್ ಅಳ್ವ, ರಾಜ್ಯ ಮಹಿಳಾ ಸಮಾಜ ಕಲ್ಯಾಣದ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ, ಶಕೂರ್ ಹಾಜಿ, ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜಾ ವಂದೇಮಾತರಂ ಹಾಡಿದರು. ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ. ಸ್ವಾಗತಿಸಿದರು. ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ನಗರಸಭೆ ಸದಸ್ಯರು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾರ್ಯಕರ್ತರು, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.