ಪುತ್ತೂರು: ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ 2023-24ನೇ ಸಾಲಿನಲ್ಲಿ 77.98 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲಾಗುವುದು. ಲೆಕ್ಕ ಪರಿಶೋಧನೆಯಲ್ಲಿ ಸಂಘವು ಸತತ 19 ವರ್ಷಗಳಿಂದ ‘ಎ’ ಶ್ರೇಣಿಯನ್ನು ಪಡೆದುಕೊಂಡಿದೆ. 2015-16 ರಿಂದ ನಿರಂತರವಾಗಿ ಶೇ.100 ಸಾಲ ವಸೂಲಾತಿ ಮಾಡಿದೆ ಎಂದು ಸಂಘದ ಅಧ್ಯಕ್ಷ ಪದ್ಮನಾಭ ಭಟ್ ಪೆರ್ನಾಜೆ ಹೇಳಿದರು.
ಅವರು ಸಂಘದ ಶತಾನಂದ ಸಭಾ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವರ್ಷಾಂತ್ಯಕ್ಕೆ ಸಂಘದಲ್ಲಿ 2.05 ಕೋಟಿ ಪಾಲು ಬಂಡವಾಳ, 23.41 ಕೋಟಿ ರೂ. ವಿವಿಧ ರೂಪದ ಠೇವಣಿಗಳನ್ನು ಹೊಂದಿದ್ದೇವೆ. ವರದಿ ವರ್ಷದಲ್ಲಿ 20. 42 ಕೋಟಿ ರೂ. ಸಾಲ ನೀಡಿದ್ದು, 15.96 ಕೋಟಿ ರೂ. ಸಾಲ ವಸೂಲಾಗಿ, ವರ್ಷಾ೦ತ್ಯಕ್ಕೆ 28.53 ಕೋಟಿ ರೂ. ಸಾಲ ಹೊರಬಾಕಿಯಿರುತ್ತದೆ. ಯಾವುದೇ ವಾಯಿದೆ ದಾಟಿದ ಸಾಲಗಳಿರುವುದಿಲ್ಲ. ಸಾಲ ವಸೂಲಾತಿಯಲ್ಲಿ ಸಂಘವು ಶೇ.100 ಗುರಿಸಾಧಿಸಿದೆ ಎಂದರು.
ಸಂಘದ ಉಪಾಧ್ಯಕ್ಷ ಧರ್ನಪ್ಪ ಗೌಡ ವಾಲ್ತಾಜೆ, ನಿರ್ದೇಶಕರಾದ ಅನಂತಕೃಷ್ಣ ಭಟ್ ಮುರ್ಗಜೆ, ಚೆನ್ನಪ್ಪ ಗೌಡ ಕೆ ಕುದುಮಾನ್,ಜಗದೀಶ್ ಕುಮಾರ್ ಕೆರೆಕೋಡಿ, ರಾಮಣ್ಣ ಗೌಡ ಕುದುಮಾನ್, ಶಿವರಾಮ ಭಟ್ ಕೆ. ಅಂಗರಜೆ, ಧನಂಜಯ ಮುದ್ರಜೆ, ಮಹಮ್ಮದ್ ಜಿ ಗಾಂಧಿನಗರ, ಲಕ್ಷ್ಮಣ ಎ ಆನಡ್ಕ, ಜ್ಯೋತಿ ಕೆ.ಆರ್. ಕುದುಂಬ್ಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ, ಸನ್ಮಾನ:
2023-24ನೇ ಶೈಕ್ಷಣಿಕ ಸಾಲಿನಲ್ಲಿ ಗರಿಷ್ಠ ಅಂಕ ಗಳಿಸಿದ ಕೆದಿಲ ಗ್ರಾಮ ವ್ಯಾಪ್ತಿಯ 4 ಶಾಲೆಗಳ ವಿದ್ಯಾರ್ಥಿಗಳಿಗೆ ಹಾಗೂ ಎಸ್.ಎಸ್. ಎಲ್.ಸಿ. ಹಾಗೂ ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ಗ್ರಾಮದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ 10 ಮಂದಿ ಹಿರಿಯ ಸದಸ್ಯರನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.
ಶಿಲ್ಪಾ ಬಡೆಕ್ಕಿಲ ಪ್ರಾರ್ಥಿಸಿದರು. ನಿರ್ದೇಶಕ ಕೆ. ಚೆನ್ನಪ್ಪ ಗೌಡ ಕುದುಮಾನ್ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಕೇಶವ ಗೌಡ ಕಾಂತುಕೋಡಿ ವರದಿ ವಾಚಿಸಿದರು. ಸಿಬ್ಬಂದಿ ರಮೇಶ್ ವಿ. ವಂದಿಸಿದರು. ಸಿಬ್ಬಂದಿಗಳಾದ ಮಿಥುನ್ ಕುಮಾರ್ ಕೆರೆಕೋಡಿ, ಮತ್ತು ಹಮೀದ್ ಸಹಕರಿಸಿದರು.