ಈತ ದೇಶದ ಶ್ರೀಮಂತ ಭಿಕ್ಷುಕ!

ಮುಂಬಯಿಯಲ್ಲಿ ಭಿಕ್ಷೆ ಬೇಡುವ ಈತನ ಬಳಿಯಿದೆ 7.5 ಕೋ. ರೂ. ಆಸ್ತಿ

ಮುಂಬಯಿ : ಭಿಕ್ಷೆ ಬೇಡುವವರೆಲ್ಲ ಕಡುಬಡವರು, ಒಂದೊತ್ತಿನ ಊಟಕ್ಕೂ ಗತಿಯಿಲ್ಲದವರು ಎನ್ನುವುದು ಸಾಮಾನ್ಯವಾದ ಭಾವನೆ. ಬಹುತೇಕ ಭೀಕ್ಷುಕರು ಇದೇ ರೀತಿ ಇರುತ್ತಾರೆ. ಆದರೆ ಭಿಕ್ಷೆ ಬೇಡಿಯೇ ಕೋಟಿಗಟ್ಟಲೆ ಸಂಪತ್ತು ಗಳಿಸಿದವರೂ ಇದ್ದಾರೆ. ಈ ಪೈಕಿ ಮುಂಬಯಿಯಲ್ಲಿ ಭಿಕ್ಷೆ ಬೇಡುವ ಭರತ್‌ ಜೈನ್‌ ಎಂಬವರು ದೇಶದ ಅತ್ಯಂತ ಶ್ರೀಮಂತ ಭಿಕ್ಷುಕ ಎಂದು ಗುರುತಿಸಲ್ಪಟ್ಟಿದ್ದಾರೆ. ಇವರ ಒಟ್ಟು ಆಸ್ತಿ ಬರೋಬ್ಬರಿ 7.5 ಕೋ. ರೂ.!

ಭರತ್‌ ಜೈನ್‌ಗೆ ಈಗ 54 ವರ್ಷ ಪ್ರಾಯ. ಕಳೆದ 40 ವರ್ಷಗಳಿಂದ ಅವರು ಮುಂಬಯಿಯ ಬೀದಿಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದಾರೆ. ಅತ್ಯಂತ ಜನನಿಬಿಢತೆ ಇರುವ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲು ನಿಲ್ದಾಣ ಅಥವಾ ಆಜಾದ್ ಮೈದಾನದಂತಹ ಪ್ರಮುಖ ಸ್ಥಳಗಳಲ್ಲೆ ಹೆಚ್ಚಾಗಿ ಭಿಕ್ಷೆ ಬೇಡುತ್ತಾರೆ. 2 ಸಾವಿರದಿಂದ 2,500 ಸಾವಿರ ರೂ.ವರೆಗೆ ಅವರ ನಿತ್ಯದ ಗಳಿಕೆ. ದಿನಕ್ಕೆ 10 ರಿಂದ 12 ಗಂಟೆಗಳ ಕಾಲ ಭಿಕ್ಷೆ ಮಾಡುತ್ತಾರೆ. ಅವರ ಭಿಕ್ಷಾಟನೆ ವೃತ್ತಿಗೆ ರಜೆ ಎಂಬುದಿಲ್ಲ.
ಜೈನ್ ಮುಂಬಯಿಯ ಪರೇಲ್​ನಲ್ಲಿ 2 ಬಿಎಚ್​ಕೆ ಫ್ಲ್ಯಾಟ್​ ಹೊಂದಿದ್ದು, ಅದರ ಬೆಲೆ 1.2 ಕೋಟಿ ರೂ. ಪತ್ನಿ, ಇಬ್ಬರು ಮಕ್ಕಳು, ತಂದೆ ಹಾಗೂ ಸಹೋದರನೊಂದಿಗೆ ಈ ಫ್ಲ್ಯಾಟ್‌ನಲ್ಲಿ ಅವರ ವಾಸಿಸುತ್ತಿದ್ದಾರೆ.
ಮಕ್ಕಳು ಕಾನ್ವೆಂಟ್​ ಶಾಲೆಯಲ್ಲೇ ಓದಿದ್ದು, ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಕುಟುಂಬ ಇತರ ಸದಸ್ಯರು ಸ್ಟೇಷನರಿ ಅಂಗಡಿ ನಡೆಸುತ್ತಿದ್ದಾರೆ. ಥಾಣೆ ನಗರದಲ್ಲಿ ಅವರಿಗೆ ಎರಡು ಅಂಗಡಿ ಕೋಣೆಗಳಿದ್ದು, ಅದರಿಂದ ತಿಂಗಳಿಗೆ ತಲಾ 30 ಸಾವಿರ ರೂ. ಬಾಡಿಗೆ ಬರುತ್ತದೆ. ತಿಂದುಂಡು ಸುಖವಾಗಿರಲು ಯಾವುದೇ ಸಮಸ್ಯೆಯಿಲ್ಲದ ಜೀವನ ಅವರದ್ದು. ಆದರೂ ಅವರು ಭಿಕ್ಷಾಟನೆ ಬಿಡಲು ಒಪ್ಪುತ್ತಿಲ್ಲ. ಮನೆಯವರಿಗೆ ಭಿಕ್ಷಾಟನೆ ಮಾಡುವುದು ಇಷ್ಟವಿಲ್ಲದಿದ್ದರೂ ಭರತ್‌ ಜೈನ್‌ ಮಾತ್ರ ನಿತ್ಯ ಬೆಳಗ್ಗೆ ಹರಕು ಬಟ್ಟೆ ಧರಿಸಿ, ಜೋಳಿಗೆ ಹೆಗಲೇರಿಸಿಕೊಂಡು ಮನೆಯಿಂದ ಹೊರಟರೆ ಬರುವುದು ರಾತ್ರಿ 9 ಗಂಟೆಗೆ.
ಜೈನ್​ಗೆ ಭಿಕ್ಷಾಟನೆ ಎಂಬುದು ಕುಲ ಕಸುಬಿನಂತಾಗಿದ್ದು, ಯಾವುದೇ ಕಾರಣಕ್ಕೂ ಅದನ್ನು ಬಿಡಲು ಇಷ್ಟವಿಲ್ಲ ಎನ್ನುತ್ತಾರೆ. ಹಾಗೆಂದು ಅವರಿಗೆ ದುರಾಸೆಯಿಲ್ಲ. ಆಗಾಗ ಅವರು ದೇವಸ್ಥಾನಗಳು, ದತ್ತಿಗಳಿಗೆ ದಾನ ಮಾಡುತ್ತಾರೆ.
ಭಿಕ್ಷೆ ಬೇಡಿಯೂ ಕೋಟಿಗಟ್ಟಲೆ ಸಂಪಾದನೆ ಮಾಡಬಹುದು ಎನ್ನುವುದಕ್ಕೆ ಭರತ್‌ ಜೈನ್‌ ಅವರೇ ಜೀವಂತ ಉದಾಹರಣೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top