ಬೆಂಕಿಯಲ್ಲಿ ಅರಳಿದ ಹೂವು ವಿದ್ಯಾ ಬಾಲನ್

ಸಾಲು ಸಾಲು ಸೋಲು, ನಿರಾಸೆ, ಅಪಮಾನವನ್ನು ಸಹಿಸಿ ಗೆದ್ದ ನಟಿ

ಪ್ರತಿಯೊಬ್ಬರ ಬದುಕಿನಿಂದ ನಾವು ಕಲಿಯುವ ಸಂಗತಿಗಳು ಬಹಳಷ್ಟು ಇರುತ್ತವೆ. ಆದರೆ ಅದರಲ್ಲಿ ಎಷ್ಟು ಶೇಕಡಾ ನಮ್ಮ ಜೀವನದಲ್ಲಿ ಅಪ್ಲೈ ಮಾಡುತ್ತೇವೆ ಅನ್ನುವುದರ ಮೇಲೆ ನಮ್ಮ ಯಶಸ್ಸು ಅಡಗಿರುತ್ತದೆ. ಅದರ ಪ್ರತಿಬಿಂಬವೇ ಇಂದಿನ ಈ ಲೇಖನ.

ಆಕೆಯ ಬದುಕು ನೂರಾರು ಹೋರಾಟಗಳ ಮೂಟೆ





























 
 

ವಿದ್ಯಾ ಬಾಲನ್ ಬದುಕು ಅಪಮಾನ, ತಿರಸ್ಕಾರ, ನೋವು ಇವೆಲ್ಲದರ ಮೊತ್ತ. ಅದೊಂದು ತೆರೆದಿಟ್ಟ ಪುಸ್ತಕ. ಆಕೆಯೇ ಹೇಳುವಂತೆ ಆಕೆಯ ಬದುಕಿನಲ್ಲಿ ಯಾವ ಸಂಗತಿ ಕೂಡ ಮುಚ್ಚಿಡಲು ಇಲ್ಲ.

ವಿದ್ಯಾ ಬಾಲನ್ ಸಿನೆಮಾಕ್ಕೆ ಬೇಕಾಗಿ ಎಲ್ಲವನ್ನೂ ಕಲಿತರು

ಆಕೆ ಹುಟ್ಟಿದ್ದು ಕೇರಳದ ಒಟ್ಟಪಾಲಂ ಎಂಬಲ್ಲಿ. ಬೆಳೆದದ್ದು ಮಾತ್ರ ಮುಂಬಯಿಯಲ್ಲಿ. ಆಕೆ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಶಾಸ್ತ್ರೀಯ ಭರತನಾಟ್ಯ, ಕಥಕ್, ಶಾಸ್ತ್ರೀಯ ಸಂಗೀತಗಳನ್ನೂ ಕಲಿತವರು. ತನ್ನೊಳಗೆ ಅದ್ಭುತವಾದ ಅಭಿನಯ ಪ್ರತಿಭೆ ಇದೆ, ತಾನು ಇಂದಲ್ಲ ನಾಳೆ ಬೆಳ್ಳಿಪರದೆಯಲ್ಲಿ ಮಹಾರಾಣಿ ಆಗಿ ಮೆರೆಯುತ್ತೇನೆ ಎಂದು ಬಲವಾಗಿ ನಂಬಿದವರು. 16ನೆಯ ವರ್ಷಕ್ಕೆ ಏಕತಾ ಕಪೂರ್ ಅವರ ‘ಹಮ್ ಪಾಂಚ್’ ಧಾರಾವಾಹಿಯಲ್ಲಿ ಮಿಂಚಿದರು. ಆದರೆ ಅವರ ಸಿನಿಮಾ ಪ್ರವೇಶದ ಹಾದಿಯು ತುಂಬ ಕಠಿಣ ಮತ್ತು ದುರ್ಗಮವಾಗಿತ್ತು. ಅವರ ಕುಟುಂಬದ ಯಾರೂ ಸಿನಿಮಾದಲ್ಲಿ ಇರಲಿಲ್ಲ. ಗಾಡ್‌ಫಾದರ್ ಇಲ್ಲದೆ ಬಾಲಿವುಡ್‌ನಲ್ಲಿ ಹೆಜ್ಜೆ ಊರಲು ಸಾಧ್ಯವೇ ಇರಲಿಲ್ಲ.

ಸಾಲು ಸಾಲು ಸೋಲುಗಳು, ನಿರಾಸೆ ಮತ್ತು ಅಪಮಾನ

ಬಂಗಾಳಿ ಭಾಷೆಯ ಸಿನಿಮಾ ‘ಭಾಲೋ ತೇಕೊ’ ಆಕೆಯ ಮೊದಲ ಫಿಲ್ಮ್. ಅದರಲ್ಲಿ ಮುಗ್ಧ ಆನಂದಿಯ ಪಾತ್ರವು ಅವರಿಗೆ ಬಂಗಾಳದ ರಾಜ್ಯ ಪ್ರಶಸ್ತಿಯನ್ನೇ ತಂದುಕೊಟ್ಟಿತು.
ಮುಂದೆ ಅವರು ದಕ್ಷಿಣ ಭಾರತದ ಸಿನಿಮಾಗಳ ಕಡೆಗೆ ಗಮನ ಹರಿಸುತ್ತಾರೆ. ಅಲ್ಲಿಂದ ಆರಂಭ
ಆಯಿತು ನೋಡಿ ಸಾಲು ಸಾಲು ಸೋಲುಗಳು. ಮೋಹನ್ ಲಾಲ್ ಜೊತೆಗೆ ಆಕೆಯ ಮೊದಲ ಸಿನಿಮಾ ಶೂಟಿಂಗ್ ಅರ್ಧಕ್ಕೇ ನಿಂತು ಹೋಯಿತು. ಮುಂದಿನ ಸಿನೆಮಾ ಅರ್ಧ ಭಾಗ ಶೂಟಿಂಗ್ ಆದ ನಂತರ ಅವರ ಪಾತ್ರಕ್ಕೆ ಮೀರಾ ಜಾಸ್ಮಿನ್ ಬಂದರು. ವಿದ್ಯಾ ಬಾಲನ್‌ಗೆ ನಿರಾಸೆ ಮತ್ತು ಅಪಮಾನಗಳು ಕಾದಿದ್ದವು. ಮತ್ತೊಂದು ಸಿನಿಮಾದಲ್ಲಿ ಕೂಡ ಅವರ ಜಾಗದಲ್ಲಿ ತ್ರಿಷಾ ಕೃಷ್ಣನ್ ರಿಪ್ಲೇಸ್ ಆದರು. ನಂತರ ಅವರು ನಟಿಸಿದ ಹಲವಾರು ಸಿನಿಮಾಗಳಲ್ಲಿ ಅವರ ಅಭಿನಯದ ದೃಶ್ಯಗಳಿಗೆ ಕತ್ತರಿ ಪ್ರಯೋಗ ಆಯಿತು. ಮೂರು ವರ್ಷಗಳ ಅವಧಿಯಲ್ಲಿ 12 ಮಲಯಾಳಂ ಸಿನಿಮಾಗಳಿಂದ ಅವರನ್ನು ವಸ್ತುಶಃ ಕಾರಣ ಇಲ್ಲದೆ ಹೊರದಬ್ಬಲಾಯಿತು.

ಜನರು ಅವರನ್ನು ‘ಐಯರ್ನ್ ಲೆಗ್ ಲೇಡಿ’ಎಂದು ಕರೆದರು

ಜನರು ಅವರಿಗೆ ದುರದೃಷ್ಟದ ನಟಿ ಎಂಬ ಹಣೆಪಟ್ಟಿ ಹಚ್ಚಿದರು. ಕೆಲವರು ಆಕೆಯನ್ನು ಓವರ್ ವೇಯ್ಟ್ ಎಂದರು. ಮುಖವು ಫೋಟೋಜೆನಿಕ್ ಅಲ್ಲ ಅಂದರು. ಡ್ರೆಸ್ಸಿಂಗ್ ಸೆನ್ಸ್ ಇಲ್ಲ ಅಂದರು. ಸಿ ಗ್ರೇಡ್ ಸಿನಿಮಾದಲ್ಲಿ ನಟಿಸುವೆಯಾ ಎಂದು ಕೇಳಿದರು. ದಕ್ಷಿಣ ಭಾರತದ ಸಿನಿಮಾಗಳು ಅವರಿಗೆ ಯಾವ ಹೆಸರು ತಂದುಕೊಡಲಿಲ್ಲ.

ಹಿಂದಿ ಸಿನಿಮಾ ರಂಗ ಕೈ ಹಿಡಿಯಿತು

ಮುಂದೆ ಬಂಗಾಳಿ ಕಾದಂಬರಿ ಆಧಾರಿತವಾದ ಹಿಂದಿ ಚಿತ್ರಕ್ಕೆ (ಪರಿಣಿತಾ) ಆಹ್ವಾನ ಬಂದಾಗ ವಿದ್ಯಾ ಬಾಲನ್‌ ಸ್ವರ್ಗಕ್ಕೆ ಮೂರೇ ಗೇಣು ಅಂತ ಅವರು ಭಾವಿಸಿದ್ದರು. ಆದರೆ ಅಲ್ಲೂ ಅವಮಾನಗಳ ಪರಂಪರೆ ಮುಂದುವರಿಯಿತು. ಚಿತ್ರ ನಿರ್ಮಾಪಕ ವಿಧು ವಿನೋದ್ ಚೋಪ್ರಾ ಆರು ತಿಂಗಳ ಕಾಲ ಆಡಿಷನ್ ಎಂದು ಮಾನಸಿಕ ಹಿಂಸೆಯನ್ನು ಕೊಟ್ಟರು. ಇಡೀ ದಿನ ಅವರು ತನ್ನ ಅಮ್ಮನ ಜೊತೆ ವಿಧು ವಿನೋದ್ ಚೋಪ್ರಾ ಅವರ ಆಫೀಸಿನ ಮುಂದೆ ಬಾಗಿಲು ಕಾಯಬೇಕಾಯಿತು. ಎಷ್ಟೋ ಬಾರಿ ಸಿನಿಮಾ ರಂಗದ ಸಹವಾಸವೇ ಬೇಡ ಎಂದು ಅವರು ನಿರ್ಧಾರ ಕೂಡ ಮಾಡಿದ್ದರು.

‘ಪರಿಣಿತಾ’ ರಿಲೀಸ್ ಆದಾಗ ಅವರನ್ನು ಜನ ‘ಸೌಂದರ್ಯ ದೇವತೆ’ ಎಂದು ಕರೆದರು

ಮುಂದೆ ಆ ಸಿನಿಮಾ ರಿಲೀಸ್ ಆದಾಗ ಸಿನೆಮಾ ವಿಮರ್ಶಕರು ಆಕೆಯ ಸೌಂದರ್ಯ ಮತ್ತು ಅಭಿನಯ ಸಾಮರ್ಥ್ಯಕ್ಕೆ ಫಿದಾ ಆದರು. ಆ ಸಿನೆಮಾದ ಪ್ರತಿ ಫ್ರೇಮಿನಲ್ಲಿ ಆಕೆಯ ಮುಗ್ಧ ಸೌಂದರ್ಯ ಹೊಳೆದು ಕಂಡಿತ್ತು.
ಆದರೆ ಬಾಲಿವುಡ್ ಪಂಡಿತರ ಅಪಸ್ವರ ನಿಲ್ಲಲೇ ಇಲ್ಲ. ‘ಅವಳ ಮಾತಲ್ಲಿ ಮಲಯಾಳಿ ಅಸೆಂಟ್ ಇದೆ. ಮಾಡರ್ನ್ ಲುಕ್ ಇಲ್ಲ, ಸೀರೆ ಬಿಟ್ಟರೆ ಬೇರೆ ಯಾವ ಡ್ರೆಸ್ ಕೂಡ ಸೂಟ್ ಆಗೋಲ್ಲ’ ಹೀಗೆ ಏನೇನೋ ಕುಹಕದ ನುಡಿಗಳು, ಕಟಕಿಯ ಮಾತುಗಳು. ಬೇರೆ ಯಾರಾದರೂ ಆಗಿದ್ದರೆ ಕುಸಿದು ಹೋಗುತ್ತಿದ್ದರು. ಆದರೆ ಆಕೆ ಮಹಾತಾಳ್ಮೆಯ ಸಾಕಾರ ಮೂರ್ತಿ. ಸಿನಿಮಾದಲ್ಲಿ ಗೆಲ್ಲಲೇಬೇಕು ಎಂದು ಆಕೆ ನಿರ್ಧಾರ ಮಾಡಿ ಆಗಿತ್ತು.

ತನ್ನ ಅಭಿನಯ, ತನ್ನ ಪಾತ್ರ, ತನ್ನ ಸಿನಿಮಾ ಇಷ್ಟು ಮಾತ್ರ ಆಕೆಯ ಜಗತ್ತು. ಒಂದೊಂದು ಪಾತ್ರದಲ್ಲೂ ಪರಕಾಯ ಪ್ರವೇಶ ಆಕೆಗೆ ಸಲೀಸು. ಅದರಿಂದಾಗಿ ಮುಂದೆ ಲಗೇ ರಹೋ ಮುನ್ನಾ ಭಾಯಿ, ಇಷ್ಕಿಯ, ಡರ್ಟಿ ಪಿಕ್ಚರ್, ಕಹಾನಿ, ಮಿಷನ್ ಮಂಗಲ್, ಭೂಲ್ ಭೂಲಯ್ಯ, ಪಾ, ನೋ ಒನ್ ಕಿಲ್ಡ್‌ ಜೆಸ್ಸಿಕಾ, ಗುರು…….ಹೀಗೆ ಒಂದರ ಹಿಂದೆ ಒಂದು ಸವಾಲಿನ ಮತ್ತು ವೈವಿಧ್ಯಮಯ ಪಾತ್ರಗಳು. ಮಹಿಳಾ ಕೇಂದ್ರಿತ ಸಿನಿಮಾಗಳು. ಎಲ್ಲವೂ ಸೂಪರ್ ಹಿಟ್. ಸಾಲು ಸಾಲು 7 ಫಿಲ್ಮ್‌ಫೇರ್ ಪ್ರಶಸ್ತಿಗಳು, ‘ಡರ್ಟಿ ಪಿಕ್ಚರ್’ ಸಿನಿಮಾದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ, ಸ್ಕ್ರೀನ್ ಅವಾರ್ಡ್ಸ್, ಗೌರವ ಡಾಕ್ಟರೇಟ್, ಪದ್ಮಶ್ರೀಯ ಗೌರವ, ಭಾರತ ಸರಕಾರದ ಸ್ವಚ್ಛತೆಯ ರಾಯಭಾರಿಯ ಶ್ರೇಯ ಇಷ್ಟೆಲ್ಲ ಅವರಿಗೆ ದೊರೆತವು.

ಆಕೆಯ ಪಾತ್ರ ವೈವಿಧ್ಯ ಅದ್ಭುತ

ಆಕೆಯ ವೈವಿಧ್ಯಮಯ ಪಾತ್ರಗಳ ಬಗ್ಗೆ ನಾನು ಎರಡು ವಾಕ್ಯಗಳನ್ನು ಬರೆಯಬೇಕು. ಮುನ್ನಾಭಾಯಿ ಸಿನಿಮಾದಲ್ಲಿ RJ ಪಾತ್ರ, ಡರ್ಟಿ ಪಿಕ್ಚರ್ ಸಿನೆಮಾದಲ್ಲಿ ಸಿಲ್ಕ್‌ಸ್ಮಿತಾ ಜೀವನದ ಪಾತ್ರ, ಪಾ ಚಿತ್ರದಲ್ಲಿ ವಿಚಿತ್ರವಾದ ಪ್ರೋಜೇರಿಯಾ ಕಾಯಿಲೆಯಿಂದ ಬಳಲುವ ಮಗ(ಅಮಿತಾಬ್)ನ ತಾಯಿ ಪಾತ್ರ, ಕಹಾನಿ ಚಿತ್ರದಲ್ಲಿ ತನ್ನ ಗಂಡನನ್ನು ಹುಡುಕಿಕೊಂಡು ಹೋಗುವ ಗರ್ಭಿಣಿ ಹೆಂಗಸಿನ ಪಾತ್ರ, ನೋ ಒನ್ ಕಿಲ್ಡ್‌ ಜೆಸ್ಸಿಕಾ ಸಿನಿಮಾದಲ್ಲಿ ನ್ಯಾಯಕ್ಕಾಗಿ ಹೋರಾಡುವ ದಿಟ್ಟೆಯ ಪಾತ್ರ, ಪರಿಣಿತಾ ಸಿನಿಮಾದಲ್ಲಿ ಹಳ್ಳಿ ಹೆಂಗಸಿನ ಪಾತ್ರ, ಮಿಷನ್ ಮಂಗಲ್ ಸಿನೆಮಾದಲ್ಲಿ ಉತ್ಸಾಹಿ ಯುವ ವಿಜ್ಞಾನಿಯ ಪಾತ್ರ, ಗುರು ಚಿತ್ರದಲ್ಲಿ ರೋಗಗ್ರಸ್ಥ ಹೆಂಗಸಿನ ಪಾತ್ರ, ತುಮಾರಿ ಸುಲು ಸಿನಿಮಾದಲ್ಲಿ ಮನೆ ಮಗಳ ಪಾತ್ರ, ಭೂಲ್‌ಭೂಲಯ್ಯ ಸಿನೆಮಾದಲ್ಲಿ (ಕನ್ನಡದ ಆಪ್ತಮಿತ್ರ ಸಿನಿಮಾದಲ್ಲಿ ಸೌಂದರ್ಯ ಮಾಡಿದ ಪಾತ್ರ)…
ಹೀಗೆ ಅದ್ಭುತವಾದ ಪಾತ್ರಗಳು, ಅಷ್ಟೇ ಅದ್ಭುತವಾದ ಅಭಿನಯ. 2007ರಲ್ಲಿ ಆಕೆಯ ನಾಲ್ಕು ಸಿನಿಮಾಗಳು ಸೂಪರ್ ಹಿಟ್ ಆದವು. ಆಕೆಯ ಹ್ಯೂಮನ್ ಕಂಪ್ಯೂಟರ್ ಶಕುಂತಲಾ ದೇವಿಯ ಪಾತ್ರ ಕ್ಲಾಸಿಕ್ ಆಯಿತು.

ಎಲ್ಲವೂ ಸ್ತ್ರೀ ಕೇಂದ್ರಿತವಾದ ಸಿನಿಮಾಗಳು

ಆಕೆ ಸಿನಿಮಾ ರಂಗ ಪ್ರವೇಶ ಮಾಡುವ ಮೊದಲು ಇದ್ದ ಹೆಚ್ಚಿನ ನಟಿಯರು ಗ್ಲಾಮರಸ್ ಗೊಂಬೆಗಳು. ಹೀಋೊ ಜೊತೆಗೆ ಮರ ಸುತ್ತುವ ಪಾತ್ರಗಳಿಗೆ ಸೀಮಿತ ಆದವರು. ಆದರೆ ವಿದ್ಯಾ ಬಾಲನ್ ಸ್ತ್ರೀ ಕೇಂದ್ರಿತವಾದ ಮತ್ತು ಕಥಾ ಪ್ರಧಾನ ಪಾತ್ರಗಳನ್ನೇ ಆಯ್ಕೆ ಮಾಡಿದರು. ಮಹಿಳೆಯ ಪಾತ್ರಗಳ ಚಹರೆಯನ್ನೇ ಬದಲಾಯಿಸಿದರು.

ಸಿನಿಮಾ ನಿರ್ಮಾಪಕ ಮತ್ತು ಉದ್ಯಮಿ ಸಿದ್ಧಾರ್ಥ್ ರಾಯ್ ಕಪೂರ್ ಅವರನ್ನು ಪ್ರೀತಿಸಿ ಮದುವೆ ಆದರು. ಹಲವು ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡಿದರು.

ಯಾವ ಜನರು ಅವರನ್ನು ಅವಮಾನ ಮಾಡಿದ್ದರೋ ಇಂದು ಅದೇ ಜನರು ಆಕೆಯನ್ನು
‘ಬಾಲಿವುಡ್ಡಿನ ನಾಲ್ಕನೆಯ ಖಾನ್ ‘ಎಂದು ಗೌರವದಿಂದ ಕರೆಯುತ್ತಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ, ತನಗೆ ಬೇಕಾದ ಪಾತ್ರವನ್ನು ತಾನೇ ಆರಿಸಿಕೊಳ್ಳುವ ಸ್ವಾತಂತ್ರ್ಯ ಇರುವ ನಟಿಯಾಗಿ ಅವರು ಇಂದು ಕೀರ್ತಿ ಶಿಖರವನ್ನು ತಲುಪಿದ್ದಾರೆ. ಆಕೆಯ ಕೆಳಗಿನ ಮಾತುಗಳನ್ನು ನೀವೊಮ್ಮೆ ಕೇಳಬೇಕು.

ವಿದ್ಯಾ ಬಾಲನ್ ಹೇಳಿದ್ದು…

ಜನ ನನ್ನ ಬಗ್ಗೆ ಏನು ಹೇಳುತ್ತಾರೆ ಎನ್ನುವುದು ನನಗೆ ಮುಖ್ಯವಲ್ಲ. ನನ್ನ ಬಗ್ಗೆ ನನ್ನ ಭಾವನೆ ನನಗೆ ಮುಖ್ಯ. ನನ್ನ ಓವರ್ ವೆಯ್ಟ್ ಬಗ್ಗೆ ಕಾಮೆಂಟ್ ಮಾಡುವವರಿಗೆ ನಾನು ಏನೂ ಹೇಳುವುದಿಲ್ಲ. ನನ್ನಲ್ಲಿ ಹಾರ್ಮೋನ್ ಸಮಸ್ಯೆ ಇದೆ. ಆದ್ದರಿಂದ ವೆಯ್ಟ್ ಸಹಜ. ಅದನ್ನು ಕರಗಿಸಲು ನಾನು ಜಿಮ್ಮಿಗೆ ಹೋಗಲಾರೆ. ಕನ್ನಡಿ ಮುಂದೆ ನಿಂತಾಗ ನನಗೆ ನಾನು ಚಂದ ಕಂಡರೆ ಸಾಕು. ನಾನು ಶೇ.100 ಸಸ್ಯಾಹಾರಿ. ಸಾಂಪ್ರದಾಯಿಕ ಕುಟುಂಬದಿಂದ ಬಂದವಳು. ನನ್ನ ದೇಹ ಪ್ರಕೃತಿಗೆ ಸೀರೆ ಮಾತ್ರವೇ ಚಂದ ಕಾಣುತ್ತದೆ. I love what I am and don’t want to change myself for the sake of the people who comment or criticize me.

ಇತ್ತೀಚೆಗೆ ಭಾರತರತ್ನ ಎಂ.ಎಸ್ ಸುಬ್ಬುಲಕ್ಷ್ಮಿಅವರ 108ನೆಯ ಜನ್ಮದಿನದಂದು ವಿದ್ಯಾ ಬಾಲನ್ ಆಕೆಯ ಹಾಗೆ 16 ಮೊಳದ ಸೀರೆ ಉಟ್ಟು, ಆಕೆಯ ರೀತಿ ಮೇಕಪ್ ಮಾಡಿ ಫೋಟೋ ಶೂಟ್ ಮಾಡಿದ್ದು ಭಾರಿ ಸುದ್ದಿ ಆಗಿದೆ. ಆ ಫೋಟೋ ನೋಡಿ ಆಕೆಯ ಅಭಿಮಾನಿಗಳು ಬೆರಗಾಗಿದ್ದಾರೆ. ಇಂತಹ ಪ್ಯಾಷನ್‌ಗಳಿಂದ ವಿದ್ಯಾ ಬಾಲನ್ ಇಂದಿಗೂ ಚಲಾವಣೆಯ ನಾಣ್ಯ ಆಗಿದ್ದಾರೆ.

ಭರತ ವಾಕ್ಯ

ವಿದ್ಯಾ ಬಾಲನ್ ನನಗೆ ಇಷ್ಟ ಆಗಿರುವುದು ಇಂತಹ ಕಾರಣಕ್ಕೆ. ಆಕೆ ನಿಜವಾಗಿಯೂ ಇತರರಿಗಿಂತ ಭಿನ್ನ ಎಂಬ ಕಾರಣಕ್ಕೆ. ಟೀಕೆ ಮಾಡುವ ಮಂದಿಯ ಮುಂದೆ ಆಕೆ ತಲೆಯೆತ್ತಿ ನಿಲ್ಲುವ ಗುಣಕ್ಕೆ. ಫೀನಿಕ್ಸ್ ಹಕ್ಕಿಯ ಹಾಗೆ ಬೂದಿಯಿಂದ ಎದ್ದು ಬರುವ ನೆವರ್ ಡೈಯಿಂಗ್ ಸ್ಪಿರಿಟ್‌ಗೆ. ಯಾವುದನ್ನೂ ಮುಚ್ಚಿಡದೆ ಎಲ್ಲವನ್ನೂ ನೇರವಾಗಿ ನುಡಿಯುವ ಆಕೆಯ ಗಟ್ಟಿತನಕ್ಕೆ. ಹಾಗೆಯೇ ಯಾವ ಸವಾಲಿನ ಪಾತ್ರಕ್ಕೂ ಎರಕವಾಗುವ ಆಕೆಯ ಅಭಿನಯ ಸಾಮರ್ಥ್ಯಕ್ಕೆ.

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top