ಬೆಳ್ಮಣ್‌ನ ನಿವೃತ್ತ ಪಿಡಿಒ ಹತ್ಯಾ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪಾತಕಿ
ಮಂಗಳೂರು : ಮಹಿಳೆಯರನ್ನು ಸ್ನೇಹ, ಪ್ರೇಮದ ನಾಟಕವಾಡಿ ಬಲೆಗೆ ಬೀಳಿಸಿ ಆಭರಣ, ನಗದು ಇತ್ಯಾದಿಗಳನ್ನು ದೋಚುತ್ತಿದ್ದ ಆರೋಪಿ ಕಾರ್ಕಳದ ಬೆಳ್ಮಣ್ ನಿವಾಸಿ ರೋಹಿತ್ ಮಥಾಯಿಸ್ (33) ಎಂಬಾತನನ್ನು ಮಂಗಳೂರು ಕಂಕನಾಡಿ ಪೊಲೀಸರು ನಿನ್ನೆ ಬಂಧಿಸಿದ್ದು, ವಿಚಾರಣೆ ವೇಳೆ ಈತ ಬೆಳ್ಮಣ್‌ನಲ್ಲಿ ಕೆಲ ವರ್ಷಗಳ ಹಿಂದೆ ಸಂಭವಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಕೊಲೆ ಪ್ರಕರಣದಲ್ಲೂ ಶಾಮೀಲಾಗಿದ್ದ ವಿಚಾರ ತಿಳಿದುಬಂದಿದೆ.
ರೋಹಿತ್ ಮಥಾಯಿಸ್ 2021ರಲ್ಲಿ ಮಂಗಳೂರಿನ ಕುಲಶೇಖರದ ಕಾಸ್ತಾಲಿನೊ ಕಾಲೋನಿ ಸೆಕ್ರೆಡ್ ಹಾರ್ಟ್ ಎಂಬಲ್ಲಿರುವ ಮಹಿಳೆಯೊಬ್ಬರನ್ನು ಬುಟ್ಟಿಗೆ ಹಾಕಿಕೊಂಡಿದ್ದ. ಕೆಲ ಸಮಯ ಅವರೊಂದಿಗೆ ವಾಸವಿದ್ದು, ಅವರ ಚಿನ್ನಾಭರಣ ಮತ್ತು ನಗದು ಲಪಟಾಯಿಸಿಕೊಂಡು ಹೋಗಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಫೇಸ್‌ಬುಕ್ ಮತ್ತಿತರ ಸೋಷಿಯಲ್ ಮೀಡಿಯಾ ಮೂಲಕ ಮಹಿಳೆಯರ ಪರಿಚಯ ಮಾಡಿಕೊಳ್ಳುತ್ತಿದ್ದ ಈತ ಬಳಿಕ ಅವರ ವಿಶ್ವಾಸ ಗಳಿಸಿ ನಿಕಟ ಒಡನಾಟ ಇಟ್ಟುಕೊಳ್ಳುತ್ತಿದ್ದ. ಕುಲಶೇಖರದ ಮಹಿಳೆಯ ಚಿನ್ನಾಭರಣ ದೋಚಿದ ಬಳಿಕ ಮುಂಬಯಿಗೆ ಹೋಗಿ ಕೆಲಸಮಯ ಅಲ್ಲಿ ತಲೆಮರೆಸಿಕೊಂಡಿದ್ದ.
ಇದೇ ರೀತಿ ಮಂಗಳೂರಿನ ಇನ್ನೋರ್ವ ಮಹಿಳೆಯನ್ನು ಬುಟ್ಟಿಗೆ ಹಾಕಿಕೊಳ್ಳಲು ಆತ ಪ್ರಯತ್ನಿಸಿದ್ದ. ಆರಂಭದಲ್ಲಿ ಮಹಿಳೆ ಅವನನ್ನು ನಂಬಿದ್ದರೂ ಬಳಿಕ ಅನುಮಾನಗೊಂಡಿದ್ದರು. ಆಕೆ ನೀಡಿದ ದೂರಿನ ಮೇರೆಗೆ ಪೊಲೀಸರು ಆ ಮಹಿಳೆಯ ಮೂಲಕವೇ ಅವನನ್ನು ಮಂಗಳೂರಿಗೆ ಬರುವಂತೆ ಮಾಡಿ ಬಂಧಿಸಿದ್ದಾರೆ. ಅವನಿಂದ 7 ಲ.ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಿವೃತ್ತ ಪಿಡಿಒ ಕೊಲೆ ಆರೋಪಿ
2019ರಲ್ಲಿ ಬೆಳ್ಮಣ್‌ನಲ್ಲಿ ಸಂಭವಿಸಿದ ನಿವೃತ್ತ ಪಿಡಿಒ ಭರತಲಕ್ಷ್ಮೀ ಕೊಲೆ ಪ್ರಕರಣದಲ್ಲಿ ರೋಹಿತ್ ಮಥಾಯಿಸ್ ಶಾಮೀಲಾಗಿದ್ದ. ಭರತಲಕ್ಷ್ಮೀ ಈತನ ನೆರೆಮನೆಯಲ್ಲೇ ವಾಸವಾಗಿದ್ದರು. ಚಿನ್ನಾಭರಣಕ್ಕಾಗಿ ಕೊಲೆ ಮಾಡಿ ಹೆಣವನ್ನು ಕಲ್ಯಾಕ್ಕೆ ತೆಗೆದುಕೊಂಡು ಹೋಗಿ ಬಾವಿಗೆ ಎಸೆದಿದ್ದ ಈ ಪ್ರಕರಣದಲ್ಲಿ ಸೆರೆಯಾಗಿ ಜಾಮೀನಿನಲ್ಲಿ ಹೊರಬಂದಿದ್ದ ರೋಹಿತ್ ಮಥಾಯಿಸ್ ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ನಡುವೆ ಫೇಸ್‌ಬುಕ್, ಇನ್ಸ್ಟಾಗ್ರಾಂ , ವಾಟ್ಸಪ್ ಮುಂತಾದ ಸೋಷಿಯಲ್ ಮೀಡಿಯಾಗಳ ಮೂಲಕ ಮೂಲಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು ವಂಚಿಸುವ ಕೃತ್ಯಕ್ಕೆ ಇಳಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.