ಲೆಬನಾನ್‌ : 5 ತಿಂಗಳ ಹಿಂದೆ ತರಿಸಿದ ಪೇಜರ್‌ ಸ್ಫೋಟಿಸಿ 9 ಮಂದಿ ಸಾವು, 2,750 ಮಂದಿಗೆ ಗಾಯ

ಪುಟಾಣಿ ಪೇಜರ್‌ ಒಳಗೆ ಇಸ್ರೇಲ್‌ ತೆಳುವಾದ ಸ್ಫೋಟಕ ಅಳವಡಿಸಿದ ಅನುಮಾನ

ಬೈರುತ್: ಲೆಬನಾನ್‌ ಮತ್ತು ಸಿರಿಯಾದಲ್ಲಿ ಹಿಜ್ಬುಲ್ಲಾ ಸಂಘಟನೆ ಸದಸ್ಯರ ಮೇಲೆ ರಹಸ್ಯ ದಾಳಿ ನಡೆದಿದೆ. ಉಗ್ರರು ಸಂವಹನಕ್ಕಾಗಿ ಬಳಸುತ್ತಿದ್ದ ಅಂಗೈಯೊಳಗಿರುವ ಪೇಜರ್‌ ಸಾಧನವೇ ಸ್ಫೋಟಗೊಂಡು ಕನಿಷ್ಠ 9 ಮಂದಿ ಸಾವನ್ನಪ್ಪಿ 2,750ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದು ಇಸ್ರೇಲ್‌ನ ಬೇಹುಪಡೆ ಮೊಸಾದ್‌ ನಡೆಸಿದ ಕೃತ್ಯ ಎಂಬ ಬಲವಾದ ಸಂಶಯವಿದೆ. ಹಿಜ್ಬುಲ್ಲಾ ಉಗ್ರರು ಸಂವಹನಕ್ಕಾಗಿ ಬಳಸುವ ಪುಟಾಣಿ ಪೇಜರ್‌ ಉಪಕರಣಗಳಲ್ಲಿ ಮೊಸಾದ್‌ ಐದು ತಿಂಗಳ ಹಿಂದೆಯೇ ಸ್ಫೋಟಕವನ್ನು ಇರಿಸಿತ್ತು ಎಂದು ವರದಿಗಳು ಹೇಳಿವೆ.
ಲೆಬನಾನ್‌ನಲ್ಲಿ ಇರಾನ್‌ನ ರಾಯಭಾರಿಯಾಗಿರುವ ಮೊಜ್ತಾಬ ಅಮನಿ ಕೂಡ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ. ಸತ್ತವರಲ್ಲಿ ಹಿಜ್ಬುಲ್‌ ಕಮಾಂಡರ್‌ನ ಓರ್ವ ಪುತ್ರನೂ ಸೇರಿದ್ದಾನೆ.
ಗಾಜಾದ ಮೇಲೆ ಇಸ್ರೇಲ್‌ ಯುದ್ಧ ಸಾರಿದ ಬಳಿಕ ಹಿಜ್ಬುಲ್ಲಾ ತನ್ನ ಸದಸ್ಯರಿಗೆ ಮೊಬೈಲ್‌ ಬಳಕೆ ಬಿಡಲು ಸೂಚಿಸಿತ್ತು. ಇದರ ಬದಲಾಗಿ ಹಳೆಯ ಪೇಜರನ್ನು ಸಂವಹನಕ್ಕಾಗಿ ಬಳಸಲು ನೀಡಿತ್ತು. ಈಗ ಈ ಪೇಜರ್‌ ಸ್ಫೋಟಗೊಂಡಿರುವುದು ಹಿಜ್ಬುಲ್ಲಾ ಮುಖಂಡರನ್ನು ಕಂಗಾಲಾಗಿಸಿದೆ. ಇದು ಇಸ್ರೇಲ್‌ ಕೃತ್ಯವಾಗಿದ್ದು, ಸೇಡು ತೀರಿಸದೆ ಬಿಡುವುದಿಲ್ಲ ಎಂದು ಹಿಜ್ಬುಲ್ಲಾ ಪ್ರತಿಜ್ಞೆ ಮಾಡಿದೆ.

ಲೆಬನಾನ್‌ನಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ, ಭಾರತೀಯ ಕಾಲಮಾನ ಮಂಗಳವಾರ ಸಂಜೆ 6.30ಕ್ಕೆ ಈ ಸ್ಫೋಟ ಸಂಭವಿಸಿದೆ. ದಾಳಿಯ ಪರಿಣಾಮ ರಸ್ತೆಯಲ್ಲಿ, ತರಕಾರಿ ಮಾರುಕಟ್ಟೆ, ಕಾರಿನಲ್ಲಿದ್ದ ಸದಸ್ಯರು ಅಲ್ಲೇ ಕುಸಿದು ಬಿದ್ದಿದ್ದಾರೆ. ಲೆಬನಾನ್‌ನಲ್ಲಿದ್ದ ಇರಾನ್‌ ರಾಯಭಾರಿ ಸಹ ಗಾಯಗೊಂಡಿದ್ದಾರೆ.
ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಎರಡರಿಂದಲೂ ನಿಷೇಧಿಸಲ್ಪಟ್ಟ ಹಿಜ್ಬುಲ್ಲಾ ಸಂಘಟನೆ ಲೆಬನಾನ್‌ನಲ್ಲಿ ರಾಜಕೀಯ ಮತ್ತು ಪ್ಯಾರಾ ಮಿಲಿಟರಿ ಪಡೆಯನ್ನು ಹೊಂದಿದ್ದು ಇರಾನ್‌ ಅದನ್ನು ಬೆಂಬಲಿಸುತ್ತಿದೆ. ಅಕ್ಟೋಬರ್ 2023ರಿಂದ ಗಾಜಾದಲ್ಲಿ ಇಸ್ರೇಲ್‌ನೊಂದಿಗೆ ಯುದ್ಧ ಮಾಡುತ್ತಿರುವ ಹಮಾಸ್ ಸಂಘಟನೆಯನ್ನು ಹಿಜ್ಬುಲ್ಲಾ ಬೆಂಬಲಿಸುತ್ತಿದೆ.
ಕೆಲ ವರದಿಗಳು ಸೈಬರ್ ದಾಳಿಯಿಂದಾಗಿ ಲಿಥಿಯಂ ಬ್ಯಾಟರಿಗಳಿಂದ ಸ್ಫೋಟಗಳು ಸಂಭವಿಸಿವೆ ಎಂದರೆ ಕೆಲವು ವರದಿಗಳು ಪೇಜರ್‌ಗಳ ಒಳಗೆ ಸ್ಫೋಟಕಗಳ ತೆಳುವಾದ ಲೈನಿಂಗ್ ಇರಿಸಲಾಗಿತ್ತು ಎಂದು ತಿಳಿಸಿವೆ.
ಈ ಕೃತ್ಯದ ಹಿಂದೆ ಇಸ್ರೇಲ್‌ ಕೈವಾಡವಿದೆ. ರಿಮೋಟ್‌ ಬಳಸಿ ಎಲ್ಲ ಪೇಜರ್‌ಗಳು ಒಂದೇ ಸಮಯದಲ್ಲಿ ಸ್ಫೋಟಗೊಳಿಸಲಾಗಿದೆ ಎಂದು ಹಿಜ್ಬುಲ್ಲಾ ಆರೋಪಿಸಿದೆ. ಹೊಸ ಪೇಜರ್‌ಗಳು ಈಗ ಸ್ಫೋಟಗೊಂಡಿದ್ದು ಎಲ್ಲ ಪೇಜರ್‌ಗಳನ್ನು ದೂರಕ್ಕೆ ಎಸೆಯಿರಿ ಎಂದು ಹಿಜ್ಬುಲ್ಲಾ ತನ್ನ ಸದಸ್ಯರಿಗೆ ಸೂಚಿಸಿದೆ.



































 
 

5 ತಿಂಗಳ ಹಿಂದೆಯೇ ಸ್ಫೋಟಕ ಪ್ಲಾಂಟ್‌

ಹಿಜ್ಬುಲ್ಲಾ ಲೊಕೇಷನ್‌ ತಿಳಿಯುತ್ತದೆ ಎಂಬ ಕಾರಣಕ್ಕೆ ಮೊಬೈಲ್‌ ಬಳಕೆ ನಿಷೇಧಿಸಿದ ಬಳಿಕ ತೈವಾನ್‌ನಿಂದ ಸುಮಾರು 5 ಸಾವಿರ ಪೇಜರ್‌ಗಳನ್ನು ಐದು ತಿಂಗಳ ಹಿಂದೆ ಆಮದು ಮಾಡಿಕೊಂಡಿತ್ತು. ಈ ಪೇಜರ್‌ಗಳ ಒಳಗೆ ತೆಲುವಾದ ಸ್ಫೋಟಕ ಲೈನಿಂಗ್‌ ಅಳವಡಿಸಿದ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈಗ ಹಿಜ್ಬುಲ್ಲ ಎಲ್ಲ ಪೇಜರ್‌ಗಳನ್ನು ಎಸೆಯಲು ಹೇಳಿದೆ.
ಕನಿಷ್ಠ ಒಬ್ಬನನ್ನು ಕೊಲ್ಲುವಷ್ಟು ಸಾಮರ್ಥ್ಯವಿರುವ ಸ್ಫೋಟಕಗಳನ್ನು ಪೇಜರ್‌ ಒಳಗೆ ಅಳವಡಿಸಲಾಗಿತ್ತು. ಮಂಗಳವಾರ ಈ ಪೇಜರ್‌ಗಳನ್ನು ಒಮ್ಮೆಲೆ ಸ್ಫೋಟಿಸಲಾಗಿದೆ. ಇದೆಲ್ಲ ಇಸ್ರೇಲ್‌ನ ಮೊಸಾದ್‌ ಕೃತ್ಯ ಎಂದು ಇರಾನ್‌ ಹೇಳಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top