ಇನ್ನೊಬ್ಬರ ಪ್ರಾಣ ಉಳಿಸಲು ಹೋಗಿ ತನ್ನ ಪ್ರಾಣ ಕಳೆದುಕೊಂಡ ಮಹಿಳೆ
ಮಂಗಳೂರು: ಸಂಬಂಧಿಕರೊಬ್ಬರ ಪ್ರಾಣ ಉಳಿಸುವ ಸಲುವಾಗಿ ತನ್ನ ಯಕೃತ್ ದಾನ ಮಾಡಿದ ನಗರದ ಕಾಲೇಜು ಉಪನ್ಯಾಸಕಿಯೊಬ್ಬರು ಮೃತಪಟ್ಟ ಹೃದಯವಿದ್ರಾವಕ ಘಟನೆ ಮಂಗಳೂರಿನಲ್ಲಿ ನಿನ್ನೆ ಸಂಭಿವಿಸದೆ. ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಟೇಶ್ವರದವರಾದ ಅರ್ಚನಾ ಕಾಮತ್ (34) ಮೃತಪಟ್ಟವರು. 69 ವರ್ಷ ಸಂಬಂಧಿಕ ಮಹಿಳೆಗೆ ಯಕೃತ್ತಿನ (Liver) ಕಸಿಗೆ ದಾನಿಯಾಗಲು ಬಯಸಿದ್ದ 34 ವರ್ಷದ ಅರ್ಚನಾ ಕಾಮತ್ ಅವರು ಯಕೃತ್ ದಾನ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಸೋಂಕಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ.
ಸದಾ ಸಮಾಜಮುಖಿ ಚಿಂತನೆಯೊಂದಿಗೆ ಸಕ್ರಿಯವಾಗಿದ್ದ ಅರ್ಚನಾ ಕಾಮತ್ ನಗರದ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದರು. ತಮ್ಮ ಯಕೃತ್ನ ಒಂದು ಭಾಗವನ್ನು ಪತಿಯ ಸಂಬಂಧಿಗೆ ದಾನ ಮಾಡಿ ಇಹಲೋಕ ತ್ಯಜಿಸಿದ್ದಾರೆ. ಅಕಾಲಿಕ ನಿಧನದಿಂದ ಅರ್ಚನಾ ಅವರ ಸಂಬಂಧಿಕರು, ಆತ್ಮೀಯರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಮೃತರು ಪತಿ ಸಿಎ ಚೇತನ ಕಾಮತ್, 4 ವರ್ಷದ ಮಗುವನ್ನು ಅಗಲಿದ್ದಾರೆ.
ತಮ್ಮ ಪತಿಯ ಕುಟುಂಬದ ಸಂಬಂಧಿಗೆ ಯಕೃತ್ತಿನ ಕಸಿ ಅಗತ್ಯವಿತ್ತು. ಆದರೆ ಕುಟುಂಬದ ಯಾವುದೇ ಸದಸ್ಯರ ರಕ್ತದ ಮಾದರಿ ರೋಗಿಯ ರಕ್ತದ ಮಾದರಿಗೆ ಹೊಂದಾಣಿಕೆಯಾಗಿಲ್ಲ. ಕೊನೆಗೆ ಅರ್ಚನಾ ಅವರ ರಕ್ತದ ಮಾದರಿ ಹೊಂದಾಣಿಕೆಯಾಗಿತ್ತು, ಅವರು ತಮ್ಮ ಯಕೃತ್ತಿನ ಭಾಗವನ್ನು ದಾನ ಮಾಡಲು ಒಪ್ಪಿಕೊಂಡಿದ್ದರು. ಬೆಂಗಳೂರಿನ ಆಸ್ಪತ್ರೆಯಲ್ಲಿ 12 ದಿನಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆದಿದ್ದು, ಅರ್ಚನಾ ಅವರ ಯಕೃತ್ತಿನ ಒಂದು ಭಾಗವನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಬಳಿಕ ಅರ್ಚನಾ ಅವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಕೆಲ ದಿನಗಳ ಬಳಿಕ ಜ್ವರ ಕಾಣಿಸಿಕೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಸಾವು ಸಂಭವಿಸಿದೆ.