10 ದಿನಗಳೊಳಗೆ ಅನುದಾನ ಬಿಡುಗಡೆಯಾಗದಿದ್ದರೆ ಸಿಎಂ ಮನೆ ಮುಂದೆ ಧರಣಿ
ಉಡುಪಿ: ಕರಾವಳಿಯ ಮೂರು ಜಿಲ್ಲೆಗಳನ್ನು ಕಾಂಗ್ರೆಸ್ ಸರಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದು, ಒಂದು ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ. ಬಿಜೆಪಿ ಶಾಸಕರು ಇದ್ದಾರೆ ಎಂಬ ಕಾರಣಕ್ಕೆ ಜಿಲ್ಲಾಡಳಿತ ನಿರಂತರ ಅಸಹಕಾರ ನೀಡುತ್ತಿದೆ ಎಂದು ಬಿಜೆಪಿ ಕಾರ್ಯದರ್ಶಿ, ಕಾರ್ಳದ ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಿಗೆ ಕಾಂಗ್ರೆಸ್ ಸರಕಾರ ಅನುದಾನ ನೀಡದೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಕರಾವಳಿಗೆ ಮಾಡುತ್ತಿರುವ ತಾರತಮ್ಯವನ್ನು 10 ದಿನದೊಳಗೆ ಸರಿಪಡಿಸದಿದ್ದರೆ, ಅನುದಾನಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಕೂರುವುದಾಗಿ ಬಿಜೆಪಿಯ ಶಾಸಕರು ಎಚ್ಚರಿಕೆ ನೀಡಿದ್ದಾರೆ.
ಜನಪ್ರತಿನಿಧಿಗಳು ಮತ್ತು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದ್ದು, ಶಾಸಕರ ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕಳೆದ ಮಳೆಗಾಲದಲ್ಲಿ ಸಿಎಂ ಸಿದ್ದರಾಮಯ್ಯ ಕೆಡಿಪಿ ಸಭೆ ಮಾಡಿದ್ದರು ಆದರೆ ಸಭೆಯ ಯಾವ ನಿರ್ಣಯ ಕೂಡ ಅನುಷ್ಠಾನಕ್ಕೆ ತಂದಿಲ್ಲ. ಕಾಲುಸಂಕಕ್ಕೆ 50 ಕೋಟಿ ಕೊಡುತ್ತೇವೆ ಎಂದಿದ್ದರು ಆದನ್ನು ನೀಡಿಲ್ಲ. 2023ರ ಮಳೆ ಹಾನಿಯಿಂದಾದ ರಸ್ತೆ ರಿಪೇರಿಗೆ, ಬೆಳೆ ಹಾನಿ, ಶಾಲಾ ಕಟ್ಟಡ ರಿಪೇರಿ ಹಣ ನೀಡಿಲ್ಲ. ಎರಡು ಬಜೆಟ್‌ನಲ್ಲೂ ಕರಾವಳಿಗೆ ಯಾವುದೇ ಯೋಜನೆ ನೀಡಿಲ್ಲ ಎಂದು ಸಿನಿಲ್ ಕುಮಾರ್ ಹೇಳಿದ್ದಾರೆ.
ಸರ್ಕಾರ ದಿವಾಳಿಯಾಗಿದ್ದು, ಮಳೆಹಾನಿ ಪರಿಹಾರವಾಗಿ ಒಂದು ಪೈಸೆ ಕೂಡ ಬಿಡುಗಡೆ ಮಾಡಿಲ್ಲ. ರಸ್ತೆಗಳ ಪ್ಯಾಚ್ ವರ್ಕ್‌ಗೂ ಹಣ ನೀಡಿಲ್ಲ ಇದರಿಂದಾಗಿ ಗ್ರಾಮೀಣ ರಸ್ತೆಗಳಲ್ಲಿ ಓಡಾಡುವ ಸ್ಥಿತಿ ಇಲ್ಲ. ಇದು ಕರಾವಳಿಯ ನಿರ್ಲಕ್ಷ್ಯವಲ್ಲದೆ ಮತ್ತಿನ್ನೇನು ಎಂದು ಪ್ರಶ್ನಿಸಿದ ಸುನಿಲ್ ಕುಮಾರ್ ಬಿಜೆಪಿ ಶಾಸಕರು ಇದ್ದಾರೆ ಎನ್ನುವ ಕಾರಣಕ್ಕೆ ಅನುದಾನ ನೀಡುತ್ತಿಲ್ಲ ಎಂದರು.
ತಾಲೂಕು ಮಟ್ಟದ ಅಧಿಕಾರಿಗಳ ನಿರಂತರ ವರ್ಗಾವಣೆ ದಂಧೆ ನಡೆಯುತ್ತಿದ್ದು, ಶಾಸಕರಿಗೆ ಜಿಲ್ಲಾಮಟ್ಟದ ಅಧಿಕಾರಿಗಳು ಅಸಹಕಾರ ತೋರುತ್ತಾರೆ. ಕರಾವಳಿಯ ಎಲ್ಲ ಬಿಜೆಪಿ ಶಾಸಕರು ನಮ್ಮ ಬೇಡಿಕೆ ನೀಡಿದ್ದು, ಈ ಅನುದಾನವನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು. ಕರಾವಳಿಯ ನಿರ್ಲಕ್ಷ 10 ದಿನದೊಳಗೆ ಸರಿಪಡಿಸದಿದ್ದರೆ, ಅನುದಾನಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಕೂರಲಿದ್ದೇವೆ. ಈ ಧರಣಿಗೆ ಸರಕಾರ ಅವಕಾಶ ನೀಡಬಾರದು ಎಂದರು.