ವಿಲೀನಗೊಳಿಸಿ ರೈಲ್ವೆ ಸೇವೆ ಸುಧಾರಿಸಲು ಕರಾವಳಿ ಜನರ ಬೇಡಿಕೆ
ಬೆಂಗಳೂರು: ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕೆಂಬ ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಲಿದೆ. ರೈಲ್ವೆ ಖಾತೆಯ ಸಹಾಯಕ ಸಚಿವ ವಿ.ಸೋಮಣ್ಣ ಅವರು ಈ ಕುರಿತು ಸುಳಿವು ನೀಡಿದ್ದಾರೆ.
ಜನರಿಗೆ ನೀಡುವ ಸೇವೆಗಳನ್ನು ಸುಧಾರಿಸುವುದಕ್ಕಾಗಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ವಿ.ಸೋಮಣ್ಣ ಹೇಳಿದ್ದಾರೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಪುಣೆ-ಹುಬ್ಬಳ್ಳಿ ನಡುವಣ ವಂದೇ ಭಾರತ್ ರೈಲನ್ನು ಸ್ವಾಗತಿಸಲು ಬೆಳಗಾವಿ ರೈಲು ನಿಲ್ದಾಣಕ್ಕೆ ಬಂದ ಅವರು, ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಂಕಣ ರೈಲ್ವೆ ವಿಲೀನದ ವಿಚಾರ ಪ್ರಸ್ತಾಪಿಸಿದ್ದಾರೆ.
ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸೇವೆಗಳನ್ನು ಒದಗಿಸುವ ಅಗತ್ಯವಿದೆ. ಹೀಗಾಗಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೇಯೊಂದಿಗೆ ವಿಲೀನಗೊಳಿಸುವ ಪ್ರಸ್ತಾವ ಪರಿಗಣಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ವಿಲೀನ ವಿಚಾರವಾಗಿ ನಾವು ಕರ್ನಾಟಕ, ಕೇರಳ ಮತ್ತು ಗೋವಾ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಮಹಾರಾಷ್ಟ್ರಕ್ಕೆ ಮನವರಿಕೆ ಮಾಡಿಕೊಟ್ಟ ನಂತರ, ವಿಲೀನ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಹಿಂದೆ ರೈಲ್ವೆ ಇಲಾಖೆ ರಾಜ್ಯ ಸರ್ಕಾರದ ಶೇ.50ರಷ್ಟು ಕೊಡುಗೆಯೊಂದಿಗೆ ರಾಜ್ಯದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿತ್ತು. ಆದರೆ ಈಗ ರಾಜ್ಯ ಸರ್ಕಾರದಿಂದ ಯಾವುದೇ ಸಹಕಾರ ದೊರೆಯುವುದಿಲ್ಲ. ಈ ಕಾರಣಕ್ಕೆ ಎಲ್ಲ ವೆಚ್ಚಗಳನ್ನು ಕೇಂದ್ರವೇ ಭರಿಸಲು ನಿರ್ಧರಿಸಿದೆ ಎಂದು ಸೋಮಣ್ಣ ತಿಳಿಸಿದರು.
ಕೊಂಕಣ ರೈಲ್ವೆ ಜಾಲ ಕೇರಳದಿಂದ ಮಹಾರಾಷ್ಟ್ರದವರೆಗೆ ವ್ಯಾಪಿಸಿದೆ. ಕರ್ನಾಟಕ ರಾಜ್ಯವೊಂದರಲ್ಲೇ ಒಟ್ಟು 742 ಕಿ.ಮೀ. ಕ್ರಮಿಸುತ್ತದೆ. ಹಿಂದಿನ ಕೇಂದ್ರದ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸ್ ಅವರ ಇಚ್ಚಾಶಕ್ತಿಯಿಂದಾಗಿ ಕರಾವಳಿ ಕರ್ನಾಟಕವನ್ನು ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಕೊಂಕಣ ರೈಲು ಮಾರ್ಗ ನಿರ್ಮಾಣವಾಗಿದೆ. ಈ ರೈಲು ಮಾರ್ಗದಿಂದಾಗಿ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೂ ಪ್ರಯೋಜನವಾಗಿದೆ.
ಅಂದಿನ ಕಾಲದಲ್ಲಿ ಸಂಪನ್ಮೂಲ ಕ್ರೋಡೀಕರಿಸುವ ಸಲುವಾಗಿ ಕೊಂಕಣ ರೈಲ್ವೆ ನಿಗಮವನ್ನು ಸ್ಥಾಪಿಸಲಾಗಿತ್ತು. ಆದರೆ ಕೊಂಕಣ ರೈಲ್ವೆ ಪ್ರಾರಂಭವಾಗಿ ಕಾಲು ಶತಮಾನವೇ ಕಳೆದಿದ್ದರೂ ಇನ್ನೂ ಅದು ನಿಗಮದ ಅಡಿಯಲ್ಲೇ ಕಾರ್ಯಾಚರಿಸುತ್ತಿದೆ. ಇದರಿಂದಾಗಿ ಕೊಂಕಣ ರೈಲ್ವೆಗೆ ಸಂಪನ್ಮೂಲದ ಕೊರತೆ ಉಂಟಾಗುತ್ತಿದ್ದು, ಹಳಿ ದ್ವಿಗುಣಗೊಳಿಸುಂಥ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಜೊತೆ ವಿಲೀನಗೊಳಿಸಬೇಕೆಂಬ ಆಗ್ರಹ ಕಳೆದ ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ಈಗ ಇದು ಸಾಕಾರವಾಗುವ ಸಾಧ್ಯತೆ ಕಾಣಿಸುತ್ತಿದೆ.