ಸವಾಲು ಸ್ವೀಕರಿಸಿ ಬಿ.ಸಿ.ರೋಡ್‌ಗೆ ಹೋದ ಹಿಂದು ಮುಖಂಡ
ಬಜರಂಗದಳ-ವಿ.ಎಚ್.ಪಿ ಬಿ.ಸಿ.ರೋಡ್ ಚಲೋ ವೇಳೆ ಪೊಲೀಸರ ಜೊತೆ ತಿಕ್ಕಾಟ
ಮಂಗಳೂರು : ಬಜರಂಗದಳ-ವಿಶ್ವ ಹಿಂದು ಪರಿಷತ್ ವತಿಯಿಂದ ಬಿ.ಸಿ.ರೋಡ್ ಚಲೋ ಕರೆ ಹಿನ್ನೆಲೆಯಲ್ಲಿ ಬಿ.ಸಿ.ರೋಡ್‌ನ ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಕಾರ್ಯಕರ್ತರು ಜೈಕಾರ ಘೋಷಣೆ ಹಾಕಿದ್ದು, ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯವಾಹ ಶರಣ್ ಪಂಪ್‌ವೆಲ್ ಬಿ.ಸಿ.ರೋಡಿಗೆ ಆಗಮಿಸಿದ್ದಾರೆ.
ಜೈಕಾರ ಘೋಷಣೆ ಕೂಗಿದ ಕಾರ್ಯಕರ್ತರು ಪೋಲೀಸರ ತಡೆಯನ್ನು ಲೆಕ್ಕಿಸದೆ ಮುಂದೆ ಸಾಗಿದರು. ಈ ವೇಳೆ ಪೋಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ ನಡೆಯಿತು. ಪರಿಸ್ಥಿತಿ ಕೈ ಮೀರಿಹೋಗುವ ಹಂತಕ್ಕೆ ತಲುಪಿದಾಗ ಪೋಲೀಸರು ಬಸ್‌ಗಳನ್ನು ರಸ್ತೆಗೆ ಅಡ್ಡ ಇಟ್ಟು ಕಾರ್ಯಕರ್ತರಿಗೆ ತಡೆಯೊಡ್ಡಿದರು.
ಹೆದ್ದಾರಿಯಲ್ಲಿ ಕೆಲಹೊತ್ತು ಕಾರ್ಯಕರ್ತರು ಘೋಷಣೆ ಕೂಗಿದರು. ಶರಣ್ ಪಂಪ್‌ವೆಲ್ ಅವರಿಗೆ ಸವಾಲು ಹಾಕಿರುವ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಅವರ ವಿರುದ್ಧ ಘೋಷಣೆ ಕೂಗಿದರು.
ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶರಣ್ ಪಂಪ್‌ವೆಲ್, ಬಿ.ಸಿ.ರೋಡಿನ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಸವಾಲು ಸ್ವೀಕರಿಸಿ ಬಿ.ಸಿ.ರೋಡಿಗೆ ಬಂದಿದ್ದೇನೆ. ಇನ್ನು ಮುಂದೆಯೂ ಇಂತಹ ಸವಾಲು ಸ್ವೀಕರಿಸಲು ತಯಾರಾಗಿದ್ದೇವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಮೂಲಕ ಹಿಂದುತ್ವಕ್ಕೆ ಜಯಸಿಕ್ಕಿದೆ. ಇಂತಹ ಸವಾಲುಗಳು ಹಿಂದೂ ಕಾರ್ಯಕರ್ತರಿಗೆ ಇದೇ ಮೊದಲಲ್ಲ, ಸಾಕಷ್ಟು ಕಾರ್ಯಕರ್ತರು ಪ್ರಾಣವನ್ನು ಕೊಟ್ಟಿದ್ದಾರೆ, ಪ್ರಕರಣವನ್ನು ಎದುರಿಸಿದ್ದಾರೆ. ಜೈಲಿಗೂ ಹೋಗಿದ್ದಾರೆ ಎಂದರು.
ನಾಗಮಂಗಲದ ಗಣೇಶ ಚತುರ್ಥಿಯ ಮೆರವಣಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ಹಿಂಸೆ ಎಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಹೇಳಿಕೆಯನ್ನು ಕೊಟ್ಟಿದ್ದೇವೆ. ಆದರೆ ಆತ ಅದಕ್ಕೆ ಬಿ.ಸಿ.ರೋಡಿಗೆ ಆಗಮಿಸುವಂತೆ ಸವಾಲು ಹಾಕಿದ್ದ. ಆತನ ಸವಾಲಿಗೆ ಉತ್ತರವಾಗಿ ನಾವು ಇಂದು ಬಿ.ಸಿ.ರೋಡಿನಲ್ಲಿ ಸೇರಿದ್ದೇವೆ. ಮುಂದೆ ಅವಶ್ಯಕತೆ ಬಿದ್ದರೆ ಆತ ಹೇಳಿದಂತೆ ಮಸೀದಿಗೆ ಹೋಗುವುದಕ್ಕೂ ಸಿದ್ದರಿದ್ದೇವೆ. ಇದು ಶರಣ್ ಒಬ್ಬನಿಗೆ ಹಾಕಿದ ಸಾವಲು ಅಲ್ಲ ಇಡೀ ಹಿಂದೂ ಕಾರ್ಯಕರ್ತರಿಗೆ ಹಾಕಿದ ಸವಾಲು ಎಂದು ಅವರು ಹೇಳಿದರು. ಯಾರಿಗೂ ಆಹ್ವಾನ ನೀಡದಿದ್ದರು ಬೃಹತ್ ಸಂಖ್ಯೆಯಲ್ಲಿ ಹಿಂದು ಕಾರ್ಯಕರ್ತರು ಸೇರಿದ್ದೀರಿ, ತಾವೆಲ್ಲರೂ ಆಗಮಿಸಿದ್ದಕ್ಕೆ ಧನ್ಯವಾದ ಸಮರ್ಪಿಸುತ್ತಿದ್ದೇನೆ ಎಂದು ಹೇಳಿದರು.
ಸವಾಲಿಗೆ ಪ್ರತಿ ಸವಾಲು ಹಾಕಿದ್ದ ಹಿಂದೂ ಸಂಘಟನೆಯ ಪ್ರಮುಖ ಪುನೀತ್ ಅತ್ತಾವರ ಕೂಡ ಬಿ.ಸಿ.ರೋಡಿನ ಚಲೋ ಕಾರ್ಯಕ್ರಮದಲ್ಲಿ ಶರಣ್ ಪಂಪ್ ವೆಲ್ ಜೊತೆ ಆಗಮಿಸಿದ್ದರು.
ಐಜಿಪಿ ಅಮಿತ್ ಸಿಂಗ್, ಎಸ್.ಪಿ.ಯತೀಶ್ ಎನ್ ., ಎಸಿ ಹರ್ಷವರ್ದನ್, ತಹಶೀಲ್ದಾರ್ ಅರ್ಚನಾ ಭಟ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಬಿ.ಸಿ.ರೋಡ್ ನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಹಿಂದೂ ಸಂಘಟನೆಯ ಪ್ರಮುಖರಾದ ಪ್ರಸಾದ್ ಕುಮಾರ್ ರೈ ಬಂಟ್ವಾಳ, ಭಾಸ್ಕರ್ ಧರ್ಮಸ್ಥಳ, ನವೀನ್ ನೆರಿಯಾ, ಭುಜಂಗ ಕುಲಾಲ್, ಗುರುರಾಜ್ ಬಂಟ್ವಾಳ, ನರಸಿಂಹ ಮಹೇಶ್ ಬೈಲೂರು, ಕೃಷ್ಣಪ್ರಸಾದ್, ಮಿಥುನ್ ಕಲ್ಲಡ್ಜ, ನವೀನ್ ಮೂಡುಶೆಡ್ಡೆ, ಸಚಿನ್ ಮೆಲ್ಕಾರ್, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಸಂದೇಶ್ ಶೆಟ್ಟಿ ಅರೆಬೆಟ್ಟು, ಗೋವಿಂದ ಪ್ರಭು, ಪುರುಷೋತ್ತಮ ಸಾಲಿಯಾನ್, ರಾಮ್ ದಾಸ್ ಬಂಟ್ವಾಳ ಮತ್ತಿತರ ಪ್ರಮುಖರು ಹಾಜರಿದ್ದರು.