ದಾನ ಮಾಡುವುದನ್ನು ಯಾರಾದರೂ ಅವರಿಂದ ಕಲಿಯಬೇಕು

ಪ್ರಾಥಮಿಕ ಶಿಕ್ಷಣಕ್ಕೆ ಕೋಟಿ ಕೋಟಿ ದುಡ್ಡು ಸುರಿಯುತ್ತಿದೆ ಅಜೀಂ ಪ್ರೇಂಜಿ ಫೌಂಡೇಷನ್

ಅಜೀಂ ಪ್ರೇಂಜಿ ಯಾರಿಗೆ ಗೊತ್ತಿಲ್ಲ ಹೇಳಿ? ತನ್ನದೇ ವಿಪ್ರೊ ಕಂಪನಿಯ ಮೂಲಕ ಜಗತ್ತಿನ ಶ್ರೇಷ್ಠ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದವರು ಅವರು. 1945 ಜುಲೈ 24ರಂದು ಜನಿಸಿದ ಅಜೀಂ ಪ್ರೇಂಜಿ ಅವರು ಅತ್ಯಂತ ಪರಿಶ್ರಮದಿಂದ ಈ ಎತ್ತರವನ್ನು ತಲುಪಿದವರು. 1999-2005ರ ಅವಧಿಯಲ್ಲಿ ಅವರು ಭಾರತದ ನಂಬರ್ ಒನ್ ಉದ್ಯಮಿಯಾಗಿ ಇದ್ದರು ಎಂದು ಫೋರ್ಬ್ಸ್ ಪತ್ರಿಕೆ ವರದಿ ಮಾಡಿತ್ತು. ಅವರೇ ಸ್ಥಾಪನೆ ಮಾಡಿದ ವಿಪ್ರೊ ಸಾಫ್ಟ್‌ವೇರ್ ಕಂಪೆನಿಯ ಶೇ.84 ಷೇರುಗಳು ಅವರ ಹೆಸರಲ್ಲಿ ಇದ್ದವು.

ತನ್ನ ಆದಾಯದಲ್ಲಿ ಒಂದು ರೂಪಾಯಿ ಕೂಡ ಕಪ್ಪು ಹಣ ಇಲ್ಲ ಎಂದು ಅವರು ಘಂಟಾಘೋಷವಾಗಿ ಹೇಳಿದ್ದಾರೆ. ಅತಿ ಹೆಚ್ಚು ಆದಾಯ ತೆರಿಗೆಯನ್ನು ಕಟ್ಟುವ ಭಾರತದ ಉದ್ಯಮಿಗಳ ಪಟ್ಟಿಯಲ್ಲಿ ಅವರು ಟಾಪ್‌ಮೋಸ್ಟ್ ಸ್ಥಾನದಲ್ಲಿ ಇದ್ದಾರೆ. ಅದೇ ರೀತಿ CSR ಚಟುವಟಿಕೆಯಲ್ಲಿ ಕೂಡ ಅವರು ಸಾಕಷ್ಟು ಮುಂದೆ ಇದ್ದಾರೆ. ಹಾಗೆಯೇ ಸಾವಿರಾರು ಮಂದಿ ಯುವಜನತೆಗೆ ಉದ್ಯೋಗ ನೀಡಿದ ಹೆಮ್ಮೆ ಹೊಂದಿದ್ದಾರೆ.





























 
 

ಅವರ ಆದ್ಯತೆ ಭಾರತದ ಪ್ರಾಥಮಿಕ ಶಾಲೆಗಳು

ಅಜೀಂ ಪ್ರೇಂಜಿ ಅವರು ಇತರ ಉದ್ಯಮಿಗಳ ಹಾಗಲ್ಲ. ಅವರ ಆದ್ಯತೆಗಳು ಮತ್ತು ಯೋಚನೆಗಳು ಇತರರಿಗಿಂತ ತುಂಬಾ ಭಿನ್ನವಾಗಿವೆ. ಅವರು ಒಂದು ಮಹಾ ಉದ್ದೇಶ ಹೊತ್ತುಕೊಂಡು 2000ರಲ್ಲಿ ಅಜೀಂ ಪ್ರೇಂಜಿ ಫೌಂಡೇಷನ್ ಸ್ಥಾಪನೆ ಮಾಡಿದರು. ತನ್ನ ಆದಾಯದ ಅರ್ಧಕ್ಕಿಂತ ಹೆಚ್ಚು ಮೊತ್ತವನ್ನು ಆ ಫೌಂಡೇಷನ್‌ಗೆ ದಾನ ಮಾಡಿದರು.

ಅವರು ತನ್ನ ಫೌಂಡೇಷನ್‌ನಲ್ಲಿ ಹೂಡಿಕೆ ಮಾಡಿರುವ ಮೊತ್ತ 2,87,000 ಕೋಟಿ ರೂಪಾಯಿಗಿಂತ ಹೆಚ್ಚು ಅಂದರೆ ನೀವು ಖಂಡಿತವಾಗಿ ಬೆರಗಾಗುತ್ತೀರಿ! ಅವರ ಆದ್ಯತೆ ಬೇರೆಯವರ ಹಾಗೆ ಸಮಾಜ ಸೇವೆ ಅಲ್ಲ, ಅವರು ಕನಸು ಕಂಡ ಕ್ಷೇತ್ರ ಪ್ರಾಥಮಿಕ ಶಿಕ್ಷಣದ ಗುಣಮಟ್ಟ. ಈ ಕ್ಷೇತ್ರದ ಬಗ್ಗೆ ಅವರ ಯೋಚನೆ ಮತ್ತು ದೃಷ್ಟಿಕೋನ ತುಂಬಾ ಪ್ರಖರವಾಗಿ ಇವೆ. ಅವರದೇ ಮಾತುಗಳನ್ನು ಕೇಳುತ್ತಾ ಹೋಗೋಣ…

ಅಜೀಂ ಪ್ರೇಂಜಿ ವಿಶನ್ ಏನು?

ದೇಶವು ಬಲಿಷ್ಠವಾಗಲು ಗಟ್ಟಿ ಮಾಡಬೇಕಾದದ್ದು ಶೈಕ್ಷಣಿಕ ಗುಣಮಟ್ಟವನ್ನು. ಅದರಲ್ಲಿಯೂ ಪ್ರಾಥಮಿಕ ಶಾಲೆಗಳ ಗುಣಮಟ್ಟವನ್ನು. ಸರಕಾರ ತನ್ನ ಅನುದಾನಗಳ ಮೂಲಕ ಶಾಲೆಗಳ ಭೌತಿಕ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದೆ. ಶಾಲೆಗೆ ಕಟ್ಟಡ, ಮೈದಾನ, ಶೌಚಾಲಯ, ಗ್ರಂಥಾಲಯ ಅತ್ಯಂತ ಅಗತ್ಯ ಹೌದು.
ಆದರೆ ಅದಕ್ಕಿಂತ ಹೆಚ್ಚು ಮುಖ್ಯ ಆದದ್ದು ಮಾನವ ಸಂಪನ್ಮೂಲದ ಅಭಿವೃದ್ಧಿ. ಶಿಕ್ಷಕರ ಉನ್ನತೀಕರಣ, ಗುಣಮಟ್ಟದ ಅಭಿವೃದ್ಧಿ, ತರಬೇತಿಗಳು, ಅದಕ್ಕೆ ಪೂರಕವಾದ ಪಠ್ಯಪುಸ್ತಕಗಳು, ಪೂರಕ ಪಠ್ಯ ಚಟುವಟಿಕೆ, ಸ್ಮಾರ್ಟ್ ಕ್ಲಾಸ್ ರೂಂಗಳು, ಶೈಕ್ಷಣಿಕ ಸಂಶೋಧನೆಗಳು, ಕಂಪ್ಯೂಟರ್ ತರಬೇತಿಗಳು, ಸುಂದರವಾದ ಪ್ರಯೋಗಾಲಯಗಳು…ಇವುಗಳ ಬಗ್ಗೆ ನಮ್ಮ ಸರಕಾರಗಳ ಕಾಳಜಿ ಸಾಲದು ಎಂದು ನನ್ನ ಅನಿಸಿಕೆ. ಅದನ್ನು ನಾವು ನಮ್ಮ ಫೌಂಡೇಷನ್ ವತಿಯಿಂದ ಮಾಡುತ್ತಿದ್ದೇವೆ.

ಹ್ಯಾಪಿ ಸ್ಕೂಲ್ ಸರಣಿ ಆರಂಭ

ಕರ್ನಾಟಕ ಸೇರಿದಂತೆ ಭಾರತದ ಆರು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ (ಪಾಂಡಿಚೇರಿ)ಗಳ ಸಾವಿರಾರು ಪ್ರಾಥಮಿಕ ಶಾಲೆಗಳನ್ನು ನಾವು ಆಯ್ಕೆ ಮಾಡಿಕೊಂಡು ಅವುಗಳನ್ನು ಮಾದರಿ ಶಾಲೆ ಮಾಡಲು ಹೊರಟಿದ್ದೇವೆ. ಅವುಗಳನ್ನು ಮುಗ್ಧ ಮಕ್ಕಳ ಸ್ಫೂರ್ತಿಯ ತಾಣಗಳಾಗಿ ರೂಪಿಸುವುದು ನಮ್ಮ ಉದ್ದೇಶ.

ಶಿಕ್ಷಣವು ಪರೀಕ್ಷೆ ಆಧಾರಿತ ಆಗಬಾರದು. ಅದು ಜ್ಞಾನ ಮತ್ತು ಕೌಶಲ ಆಧಾರಿತ ಆಗಿರಬೇಕು. ಮಕ್ಕಳು ತಮ್ಮ ಶಿಕ್ಷಕರ ಜೊತೆ, ಸಹಪಾಠಿಗಳ ಜೊತೆಗೆ, ಸುತ್ತಲಿನ ಪರಿಸರದ ಜೊತೆಗೆ, ಪ್ರಾಣಿಪಕ್ಷಿಗಳ ಜೊತೆಗೆ ಹೇಗೆ ವರ್ತಿಸಬೇಕು ಎಂದು ಕಲಿಯದೆ ಶಿಕ್ಷಣ ಪೂರ್ತಿ ಆಗುವುದೇ ಇಲ್ಲ.
ಈ ಮಹಾ ಉದ್ದೇಶಕ್ಕಾಗಿ ಅವರ ಫೌಂಡೇಷನ್ ಪ್ರತಿ ವರ್ಷ ಕೋಟಿ ಕೋಟಿ ರೂ. ಅನುದಾನವನ್ನು ಪ್ರಾಥಮಿಕ ಶಾಲೆಗಳಿಗೆ ನೀಡುತ್ತದೆ.

ಅಜೀಂ ಪ್ರೇಂಜಿ ಹೇಳಿದ ಮೊಲದ ಕಥೆ

ಪ್ರಾಥಮಿಕ ಶಾಲೆಗಳ ಗುಣಮಟ್ಟದ ಬಗ್ಗೆ ಅವರಿಗೆ ಇರುವ ಕಾಳಜಿ ಮತ್ತು ಪ್ರೀತಿಗಳು ನಿಜಕ್ಕೂ ಶ್ಲಾಘನೀಯ ಆಗಿದೆ. ಅವರು ಒಂದು ಕಡೆ ಹೇಳಿದ ಮೊಲದ ಕಥೆ ಇಂದಿನ ನಮ್ಮ ಶಾಲೆಗಳ ದುಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ನೀವೂ ಕೇಳಿ…

ಒಂದೂರಲ್ಲಿ ಒಂದು ಮೊಲಗಳ ಶಾಲೆ ಇತ್ತು. ಅದಕ್ಕೆ ಒಂದು ಮೊಲದ ಮರಿ ಹೊಸದಾಗಿ ಸೇರ್ಪಡೆ ಆಗಿತ್ತು. ಇಡೀ ವರ್ಷ ಅಲ್ಲಿ ಕಲಿತ ಮೇಲೆ ಅದಕ್ಕೆ ಪುಟಿಯುವ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಬಂತು. ಆದರೆ ಈಜುವ ಪರೀಕ್ಷೆಯಲ್ಲಿ ಅದಕ್ಕೆ ಸೊನ್ನೆ ಮಾರ್ಕ್ ಬಂತು.

ಆಗ ಮೊಲದ ಪೋಷಕರಿಗೆ ಆತಂಕ ಆಯಿತು. ಅವರು ತಮ್ಮ ಮರಿಗೆ ಹೇಳಿದರು- ನೋಡು ಮಗು, ನೀನು ಹೇಗೂ ಪುಟಿಯುವುದರಲ್ಲಿ ಚಾಂಪಿಯನ್ ಆಗಿದ್ದಿ. ಇನ್ನು ಮುಂದೆ ಪುಟಿಯುವುದನ್ನು ಮರೆತು ಬಿಡು. ನಿನ್ನನ್ನು ಸ್ವಿಮ್ಮಿಂಗ್ ಕ್ಲಾಸಿಗೆ ಸೇರಿಸುತ್ತೇವೆ. ನಮಗೆ ರಿಸಲ್ಟ್ ಬೇಕು ಎಂದರು.

ಅದೇ ರೀತಿ ಮೊಲವು ಸ್ವಿಮ್ಮಿಂಗ್ ಕ್ಲಾಸಿಗೆ ಸೇರಿತು. ಪುಟಿಯುವುದನ್ನು ಮರೆತಿತು.ಇಡೀ ವರ್ಷ ಸ್ವಿಮ್ಮಿಂಗ್ ಕಲಿತರೂ ಅದಕ್ಕೆ ಸ್ವಿಮ್ಮಿಂಗ್ ಬರಲಿಲ್ಲ. ಅದು ಅದರ ಸ್ವಭಾವ ಆಗಿರಲಿಲ್ಲ. ಅಲ್ಲಿಗೆ ಮೊಲದ ಮರಿಯು ತನ್ನ ಸ್ವಾಭಾವಿಕ ಕೌಶಲವಾದ ಪುಟಿಯುವುದನ್ನು ಪೂರ್ತಿ ಕಳೆದುಕೊಂಡಿತು.

ಇದು ಅಜೀಂ ಪ್ರೇಂಜಿ ಅವರು ನಮ್ಮ ಶಿಕ್ಷಣ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ನಮ್ಮ ಶಾಲೆಗಳಲ್ಲಿ ಇಂದು ಆಗುತ್ತಿರುವುದು ಅದೇ ಅಲ್ಲವೇ? ಇತ್ತೀಚೆಗೆ ಅವರು ಉನ್ನತ ಶಿಕ್ಷಣವನ್ನು ಸಪೋರ್ಟ್ ಮಾಡಲು ಹಲವು ವಿವಿಗಳನ್ನು ಕೂಡ ಹುಟ್ಟುಹಾಕುತ್ತಿದ್ದಾರೆ. ಬೆಂಗಳೂರಿನಲ್ಲಿ ಬಹಳ ಪ್ರಸಿದ್ಧವಾದ ಅಜೀಂ ಪ್ರೇಂಜಿ ಯುನಿವರ್ಸಿಟಿ ಅವರು ಸ್ಥಾಪನೆ ಮಾಡಿ ಬೆಳೆಸುತ್ತಿದ್ದಾರೆ.

ಕರ್ನಾಟಕ ಸರಕಾರದ ಜೊತೆಗೆ ಅಜೀಂ ಪ್ರೇಂಜಿ ಒಪ್ಪಂದ

ಕಳೆದ ಹಲವು ವರ್ಷಗಳಿಂದ ಕರ್ನಾಟಕ ಸರಕಾರ ರಾಜ್ಯದ ಎಲ್ಲ ಸರಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಾರಕ್ಕೆ ಎರಡು ದಿನ ಹೆಚ್ಚು ಪೌಷ್ಟಿಕತೆಯ ಆಹಾರವಾದ ಕೋಳಿ ಮೊಟ್ಟೆ ನೀಡುತ್ತಿತ್ತು. ರಾಜ್ಯದ ಎಲ್ಲ ಸರಕಾರಿ ಮತ್ತು ಅನುದಾನಿತ ಶಾಲೆಗಳ ಒಂದರಿಂದ ಹತ್ತನೇ ತರಗತಿಯವರೆಗೆ ಕಲಿಯುತ್ತಿರುವ ಅಂದಾಜು 55.26 ಲಕ್ಷ ಮಕ್ಕಳು ಈ ಯೋಜನೆಯ ಫಲಾನುಭವಿಗಳು ಆಗಿದ್ದರು. ಈಗ ನಮ್ಮ ರಾಜ್ಯ ಸರಕಾರದ ಜೊತೆಗೆ ಒಪ್ಪಂದ ಮಾಡಿಕೊಂಡ ಅಜೀಂ ಪ್ರೇಂಜಿ ರಾಜ್ಯದ ಎಲ್ಲ ಮಕ್ಕಳಿಗೆ ಈ ತಿಂಗಳಿಂದ ವಾರಕ್ಕೆ 6 ದಿನವೂ ಮೊಟ್ಟೆ ದೊರೆಯುವಂತೆ ವ್ಯವಸ್ಥೆ ಮಾಡಿದ್ದಾರೆ. ಈ ವ್ಯವಸ್ಥೆಯು ಮುಂದಿನ ಮೂರು ವರ್ಷಗಳ ಕಾಲ ಮುಂದುವರಿಯಲಿದ್ದು ಅಜೀಂ ಪ್ರೇಂಜಿ ಫೌಂಡೇಷನ್ ಈ ಯೋಜನೆಗಾಗಿ 1500 ಕೋಟಿ ದುಡ್ಡು ಬಿಡುಗಡೆ ಮಾಡಿ ರಾಜ್ಯ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ‘ಹಸಿದ ಮಕ್ಕಳ ಆಶೀರ್ವಾದ ನನಗೆ ದೊರೆತರೆ ಸಾಕು. ನಾನು ಕೊಟ್ಟದ್ದು ಸಣ್ಣ ಮೊತ್ತ ಎಂದು ನನಗೆ ಗೊತ್ತಿದೆ’ ಎಂದು ನಗುತ್ತಾ ಹೇಳುವ ಅಜೀಂ ಪ್ರೇಂಜಿ ಯಾವುದೇ ಗಲಾಟೆ, ವಿವಾದಗಳಿಂದ ದೂರ ಇರುವುದೇ ನನ್ನ ಆರೋಗ್ಯದ ಗುಟ್ಟು’ ಎಂದಿದ್ದಾರೆ.

ಅವರಿಗೆ ಈಗ 79 ರನ್ನಿಂಗ್

ಈ ಮೇಲಿನ ಕಾರಣಕ್ಕಾಗಿ ಅಜೀಂ ಪ್ರೇಂಜಿ ಅವರು ಭಾರತದ ಅಭಿಮಾನದ ಉದ್ಯಮಿ ಎಂದು ನನಗೆ ಅನಿಸುತ್ತದೆ. ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯು ಈಗಾಗಲೇ ದೊರೆತಿದ್ದು ಶ್ರೇಷ್ಠವಾದ ಭಾರತ ರತ್ನ ಪ್ರಶಸ್ತಿ ಮಾತ್ರ ಬಾಕಿ ಇದೆ, ಮತ್ತು ಅದಕ್ಕೆ ಅವರು ಅತ್ಯಂತ ಅರ್ಹರಾಗಿದ್ದಾರೆ.

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top