70 ವರ್ಷ ಮೇಲ್ಪಟ್ಟ ಎಲ್ಲ ಹಿರಿಯರಿಗೆ 5 ಲ.ರೂ. ತನಕ ಉಚಿತ ಚಿಕಿತ್ಸೆ
ಹೊಸದಿಲ್ಲಿ: ಎಪ್ಪತ್ತು ವರ್ಷ ಮೇಲ್ಪಟ್ಟ ಎಲ್ಲರನ್ನು ಅವರ ಆದಾಯದ ತಾರತಮ್ಯವಿಲ್ಲದೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆ ವ್ಯಾಪ್ತಿಗೆ ತರಲಾಗುತ್ತಿದೆ. ಆರೋಗ್ಯ ಸಚಿವಾಲಯದಿಂದ ಪಡೆದ ಮಾಹಿತಿಯ ಪ್ರಕಾರ, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮೊಬೈಲ್ ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇನ್ನು ಒಂದು ತಿಂಗಳಲ್ಲಿ ಆ್ಯಪ್ ಬಿಡುಗಡೆಯಾಗಲಿದ್ದು, ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಅಭಿಯಾನ ಆರಂಭಿಸಲಿದೆ. ಇದಕ್ಕೆ ಆಧಾರ್ ಕಾರ್ಡ್ ಇದ್ದರೆ ಸಾಕಾಗುತ್ತದೆ. ದಿಲ್ಲಿ, ಒಡಿಶಾ, ಪಶ್ಚಿಮ ಬಂಗಾಳ ಸರ್ಕಾರಗಳು ಯೋಜನೆ ಜಾರಿಗೊಳಿಸದ ಕಾರಣ ಈ ರಾಜ್ಯಗಳ ಜನರು ಆಯುಷ್ಮಾನ್ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ.
70 ವರ್ಷಕ್ಕಿಂತ ಮೇಲ್ಪಟ್ಟ ದೇಶದ ಎಲ್ಲಾ ಹಿರಿಯ ನಾಗರಿಕರನ್ನು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಹೇಳಿದ್ದಾರೆ. 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರು ಪ್ರತಿ ವರ್ಷ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯುತ್ತಾರೆ. ಅವರ ಆದಾಯ ಎಷ್ಟಿದ್ದರೂ ಸಮಸ್ಯೆಯಿಲ್ಲ. ಸರ್ಕಾರದ ಈ ನಿರ್ಧಾರದಿಂದ ದೇಶಾದ್ಯಂತ 6 ಕೋಟಿ ಹಿರಿಯ ನಾಗರಿಕರು ಯೋಜನೆಯ ಲಾಭ ಪಡೆಯಲಿದ್ದಾರೆ.
ಒಂದೇ ಕುಟುಂಬದ ಎಷ್ಟು ಜನರು ಆಯುಷ್ಮಾನ್ ಕಾರ್ಡ್ ಅನ್ನು ಪಡೆಯಬಹುದು ಎಂಬುದು ಸಾಕಷ್ಟು ಮಂದಿಗೆ ತಿಳಿದಿಲ್ಲ. ಈ ಸರ್ಕಾರಿ ಯೋಜನೆಯ ಫಲಾನುಭವಿಯಾಗುವವರಿಗೆ ಯಾವುದೇ ಮಿತಿ ನಿಗದಿಪಡಿಸಿಲ್ಲ. ಕುಟುಂಬ ಎಲ್ಲ ಸದಸ್ಯರು ಈ ಯೋಜನೆ ಪ್ರಯೋಜನ ಪಡೆಯಬಹುದು.