ಮಮತಾ ಬ್ಯಾನರ್ಜಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ರಾಜ್ಯಪಾಲರು

ಮುಖ್ಯಮಂತ್ರಿಯನ್ನು ಲೇಡಿ ಮ್ಯಾಕ್‌ಬೆತ್‌ ಎಂದು ಕರೆದ ಗವರ್ನರ್‌

ಕೋಲ್ಕತ : ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ ಜನರ ತೀವ್ರ ಆಕ್ರೋಶ ಎದುರಿಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಅಲ್ಲಿನ ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.
ಮಮತಾ ಬ್ಯಾನರ್ಜಿಯನ್ನು ತೀಕ್ಷ್ಣವಾಗಿ ಟೀಕಿಸಿರುವ ರಾಜ್ಯಪಾಲರು ಮುಖ್ಯಮಂತ್ರಿಯನ್ನು ಪಶ್ಚಿಮ ಬಂಗಾಳದ ಲೇಡಿ ಮ್ಯಾಕ್‌ಬೆತ್‌ ಎಂದು ಕರೆದು ಮುಖ್ಯಮಂತ್ರಿ ಜೊತೆ ಯಾವುದೇ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಆರೋಗ್ಯ ಸಚಿವರೇ ಗೃಹ ಸಚಿವರಂತೆ ವರ್ತಿಸುತ್ತಿರುವ ವಿಪರ್ಯಾಸ ನಡೆಯುತ್ತಿದೆ. ಮುಖ್ಯಮಂತ್ರಿಯೇ ಗೃಹಸಚಿವರಾಗಿದ್ದರೂ ಅವರು ಜನರನ್ನು ರಕ್ಷಿಸುವ ಬದಲು ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ. ಇಡೀ ಹೂಗ್ಲಿ ನದಿಯ ನೀರಿನಲ್ಲಿ ತೊಳೆದರೂ ಅವರ ಕೈಗೆ ಅಂಡಿದ ಕಳಂಕ ಹೋಗುವುದಿಲ್ಲ ಎಂದು ರಾಜ್ಯಪಾಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂವಿಧಾನವನ್ನು ಉಲ್ಲಂಘಿಸಿದ ಮುಖ್ಯಮಂತ್ರಿಯ ವಿರುದ್ಧ ನಾನು ಕ್ರಮ ಕೈಗೊಳ್ಳುತ್ತೇನೆ. ರಾಜ್ಯಪಾಲನಾಗಿ ನಾನು ಸಂವಿಧಾನಕ್ಕೆ ಬದ್ಧವಾಗಿ ಕೆಲಸ ಮಾಡಲೇ ಬೇಕಾಗುತ್ತದೆ ಎಂದು ರಾಜ್ಯಪಾಲರು ಹೇಳಿದ್ದಾರೆ.
ಇದಕ್ಕೂ ಮೊದಲು ಮಮತಾ ಬ್ಯಾನರ್ಜಿ ತನ್ನ ಸರಕಾರವನ್ನು ಬೀಳಿಸುವ ಪ್ರಯತ್ನ ನಡೆಯುತ್ತಿದೆ. ನ್ಯಾಯವನ್ನು ಉಳಿಸುವ ಸಲುವಾಗಿ ನಾನು ರಾಜೀನಾಮೆ ಕೊಡಲು ತಯಾರಿದ್ದೇನೆ ಎಂದು ಹೇಳಿದ್ದರು.
ಆರ್‌ ಜಿ ಕರ್‌ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆಯ ಬಳಿಕ ಪಶ್ಚಿಮ ಬಂಗಾಳ ಅಶಾಂತಿಯ ಮಡುವಾಗಿ ಬದಲಾಗಿದೆ. ನ್ಯಾಯ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಯಾವ ಒಲೈಕೆಗೂ ಬಗ್ಗುತ್ತಿಲ್ಲ. ಸುಪ್ರೀ ಕೋರ್ಟಿನ ಸೂಚನೆಯನ್ನೂ ಲೆಕ್ಕಿಸದೆ ಪ್ರತಿಭಟನೆ ಮುಂದುವರಿಸಿದ್ದಾರೆ. ಬೇಡಿಕೆ ಈಡೇರದೆ ಸರಕಾರದ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಕೋಲ್ಕತದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟು ಮಮತಾ ಬ್ಯಾನರ್ಜಿ ಕಂಗಾಲಾಗಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top