ಇಷ್ಟಕ್ಕೂ ಪಾತಕಿಯ ಬೇಡಿಕೆ ಏನು ಗೊತ್ತೆ?
ಉಡುಪಿ: ಉಡುಪಿಯ ನೇಜಾರಿನಲ್ಲಿ ಕಳೆದ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಾಯಿ ಮತ್ತು ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾನೆ. ಇಷ್ಟಕ್ಕೂ ಅವನ ಬೇಡಿಕೆ ಏನೆಂದರೆ ತನ್ನನ್ನು ಒಂಟಿ ಸೆಲ್‌ನಿಂದ ಜನರಲ್ ಸೆಲ್‌ಗೆ ಸ್ಥಳಾಂತರಿಸಬೇಕೆನ್ನುವುದು. ನಿನ್ನೆಯಿಂದ ಆತ ಅನ್ನ, ನೀರು ಸ್ವೀಕರಿಸಲು ನಿರಾಕರಿಸಿ ಉಪವಾಸ ಕುಳಿತಿದ್ದಾನಂತೆ. ಪ್ರವೀಣ್ ಚೌಗುಲೆಯನ್ನು ಭದ್ರತೆಯ ಕಾರಣಕ್ಕಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿಡಲಾಗಿದೆ. ತಿಂಡಿ, ಊಟ ಮಾಡದೆ ಬೇರೆ ಸೆಲ್‌ಗೆ ವರ್ಗಾಯಿಸಲು ಹಠ ಹಿಡಿದಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ.
2023ರ ನ.12ರಂದು ಉಡುಪಿಯ ನೇಜಾರ್ ಬಳಿ ಒಂದೇ ಕುಟುಂಬದ ನಾಲ್ವರ ಕೊಲೆ ನಡೆದಿತ್ತು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಉದ್ಯೋಗಿ ಪ್ರವೀಣ್ ಅರುಣ್ ಚೌಗುಲೆ ನೇಜಾರಿನಲ್ಲಿ ಮನೆಗೆ ನುಗ್ಗಿ ಹಸೀನಾ(48) ಮತ್ತು ಆಕೆಯ ಮಕ್ಕಳಾದ ಅಫ್ಸಾನ್(23), ಅಸೀಮ್ (12) ಮತ್ತು ಅಯ್ನಾಜ್‌ರನ್ನು (21) ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಹಸೀನಾರ ಅತ್ತೆ ಮೇಲೂ ದಾಳಿ ಮಾಡಿದ್ದ. ಆದರೆ ಅವರು ತಪ್ಪಿಸಕೊಂಡು ಬಾತ್‌ರೂಮ್‌ಗೆ ಹೋಗಿ ಬಾಗಿಲು ಹಾಕಿಕೊಂಡ ಕಾರಣ ಬಚಾವಾಗಿದ್ದರು. ಸದ್ಯ ಈಗ ಆರೋಪಿ ಪ್ರವೀಣ್ ಪರಪ್ಪನ ಅಗ್ರಹಾರ ಜೈಲ್‌ನ ಪ್ರತ್ಯೇಕ ಸೆಲ್‌ನಲ್ಲಿದ್ದಾನೆ. ಬೇರೆ ಸೆಲ್‌ಗೆ ತನ್ನ ವರ್ಗಾವಣೆ ಹಾಗೂ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ ಕೋರ್ಟಿಗೆ ವರ್ಗಾಯಿಸಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಚೌಗುಲೆ ತಿಂಡಿ, ಊಟ ಮಾಡದೆ ಉಪವಾಸ ಮಾಡುತ್ತಿದ್ದಾನೆ.
ಸೆಂಟ್ರಲ್ ಜೈಲ್‌ನ ಪ್ರಧಾನ ಬ್ಲಾಕ್‌ಗೆ ತನ್ನನ್ನು ಶಿಫ್ಟ್ ಮಾಡುವಂತೆ ಚೌಗುಲೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ. ಆದರೆ ಪ್ರವೀಣ್ ಚೌಗುಲೆಗೆ ಜೀವ ಬೆದರಿಕೆ ಇರುವುದರಿಂದ ಪ್ರತ್ಯೇಕ ಸೆಲ್‌ನ ಅಗತ್ಯ ಇದೆ ಎಂದು ಜೈಲ್‌ನ ಸಹಾಯಕ ಅಧೀಕ್ಷಕರು ಕೋರ್ಟ್‌ಗೆ ಸ್ಪಷ್ಟನೆ ನೀಡಿದ್ದಾರೆ. ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಉಡುಪಿಯಿಂದ ಬೆಂಗಳೂರಿಗೆ ಆರೋಪಿಯನ್ನು ಪೊಲೀಸರು ಶಿಫ್ಟ್ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ
ಇಡೀ ನಾಡು ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ದಿನ 2023ರ ನವೆಂಬರ್ 12ರಂದು ಪ್ರವೀಣ್ ಚೌಗುಲೆ ತನ್ನ ಸಹೋದ್ಯೋಗಿಯ ಮನೆಗೆ ನುಗ್ಗಿ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಿದ್ದ. ಕೇವಲ 15 ನಿಮಿಷಗಳಲ್ಲಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ. ಮೂಲತಃ ಕೋಡಿಬೆಂಗ್ರೆಯ ಪ್ರಸ್ತುತ ನೇಜಾರು ನಿವಾಸಿಗಳಾದ ಹಸೀನಾ (48) ಅವರ ಮಕ್ಕಳಾದ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ಅಫ್ನಾನ್ (23), ಏರ್ ಇಂಡಿಯಾದಲ್ಲಿ ಚೌಗುಲೆ ಉದ್ಯೋಗಿಯಾಗಿದ್ದ ಅಯ್ನಾಝ್ (21) ಹಾಗೂ 8ನೇ ತರಗತಿಯ ಅಸೀಮ್(12) ಕೊಲೆಯಾದವರು. ಹತ್ಯೆಗೀಡಾದ ಯುವತಿ ಅಫ್ನಾನ್ ಹಾಗೂ ಕೊಲೆ ಮಾಡಿದ ಆರೋಪಿ ಇಬ್ಬರೂ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಕೊಲೆಯಾದ ಯುವತಿಗೂ ಆರೋಪಿಗೂ ಪರಿಚಯವಿತ್ತು. ತನ್ನನ್ನು ಪ್ರೀತಿಸವಂತೆ ಆರೋಪಿ ಅಫ್ನಾನ್‌ಳನ್ನು ಪೀಡಿಸುತ್ತಿದ್ದ. ಆಕೆ ಒಪ್ಪದಿದ್ದಾಗ ಕೊಲೆ ಮಾಡಿದ್ದ.