ಕಾರ್ಕಳ ಸಮೀಪ ಸಾಣೂರಿನಲ್ಲಿ ಶಿಕ್ಷಕಿಯ ಮನೆಯಲ್ಲಿ ನಡೆಯುತ್ತಿದ್ದ ದಂಧೆ
ಕಾರ್ಕಳ: ಕಾರ್ಕಳ ಸಮೀಪ ಸಾಣೂರಿನ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಬಯಲಿಗೆಳೆದಿದ್ದು, ಇದರಲ್ಲಿ ಓರ್ವ ಸರಕಾರಿ ಶಾಲಾ ಶಿಕ್ಷಕಿಯೂ ಶಾಮೀಲಾಗಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಮೂರನೇ ಆರೋಪಿಯಾಗಿ ಕಾರ್ಕಳ ತಾಲೂಕಿನ ಈದು ಗ್ರಾಮದ ಹೊಸ್ಮಾರು ಸರ್ಕಾರಿ ಶಾಲೆಯೊಂದರ ಶಿಕ್ಷಕಿಯನ್ನು ಪೊಲೀಸರು ಎಫ್‌ಐಆರ್‌ನಲ್ಲಿ ಹೆಸರಿಸಿದ್ದಾರೆ.
ಸಾಣೂರು ಗ್ರಾಮದ ಅವಿನಾಶ್ ಕಂಪೌಂಡ್‌ನ ಪ್ರಮೀಳಾ ವಿಜಯಕುಮಾರ್ ಜೈನ್ ಎಂಬಾಕೆಗೆ ಸೇರಿದ ಮನೆಯಲ್ಲಿ ಕೆಲ ವರ್ಷಗಳಿಂದ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು ಎಂದು ಸಾರ್ವಜನಿಕರು ಆರೋಪಿಸಿದ್ದರು. ಖಚಿತ ಮಾಹಿತಿ ಮೇರೆಗೆ ಪ್ರಭಾರ ಎಎಸ್‌ಪಿ ಜಯಶ್ರೀ ಎಸ್.ಮಾನೆ ಅವರ ನೇತೃತ್ವದಲ್ಲಿ ಪೊಲೀಸರ ತಂಡವರು ಸೆಪ್ಟೆಂಬರ್ 8ರಂದು ದಿಢೀರ್ ದಾಳಿ ನಡೆಸಿದಾಗ ವೇಶ್ಯಾವಾಟಿಕೆ ಕೃತ್ಯ ಬೆಳಕಿಗೆ ಬಂದಿದೆ.
ದಾಳಿ ವೇಳೆ ಸಂತ್ರಸ್ತೆಯೋರ್ವಳನ್ನು ರಕ್ಷಿಸಲಾಗಿದೆ. ಘಟನಾ ಸ್ಥಳದಿಂದ 6,000 ರೂ. ನಗದು, ಕೃತ್ಯಕ್ಕೆ ಬಳಸಿಕೊಳ್ಳಲಾಗುತ್ತಿದ್ದ ವಸ್ತುಗಳನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.
1ನೇ ಆರೋಪಿ ಭರತ್ ಜೈನ್ ನಾರಾವಿ ಅಲಿಯಾಸ್ ಭರತ್ ಶೆಟ್ಟಿ, 2ನೇ ಆರೋಪಿ ಉಳ್ಳಾಲದ ಸಂಪತ್ ಈತ ಯುವತಿ, ಮಹಿಳೆಯರನ್ನು ಸರಬರಾಜು ಮಾಡುತ್ತಿದ್ದವ. 3ನೇ ಆರೋಪಿ ಈದು ಪ್ರಮೀಳಾ ವಿಜಯಕುಮಾರ್ ಜೈನ್. ಈಕೆ ಹೊಸ್ಮಾರು ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಪತಿ ಈದು ಗ್ರಾಮ ಪಂಚಾಯತ್‌ನ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ ರಾಜಕೀಯ ಮುಖಂಡ ಎಂಬ ಮಾಹಿತಿ ತಿಳಿದುಬಂದಿದೆ. ಪ್ರಮುಖ ಆರೋಪಿ ನಾರಾವಿಯ ಭರತ್ ಜೈನ್ ಅಲಿಯಾಸ್ ಭರತ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾಣೂರಿನಲ್ಲಿರುವ ಈ ಮನೆಯನ್ನು ಶಿಕ್ಷಕಿ ಬಾಡಿಗೆಗೆ ನೀಡಿದ್ದಳು ಎನ್ನಲಾಗಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು, ಪ್ರಕರಣದಲ್ಲಿ ಇತರರು ಭಾಗಿಯಾಗಿರುವ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.