ಎಚ್‌ಎಸ್‌ಆರ್‌ಪಿ ಡೆಡ್‌ಲೈನ್‌ ಸೆ.15ಕ್ಕೆ ಮುಕ್ತಾಯ | ಸೆ.16ರಿಂದ ಬೀಳಲಿದೆ 500 ರೂ. ದಂಡ

ಬೆಂಗಳೂರು: ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಸಲು ಸರ್ಕಾರ ಮತ್ತು ಕೋರ್ಟ್ ನೀಡಿರುವ ಗಡುವು ಮುಗಿಯಲು ಇನ್ನು ಆರು ದಿನ ಮಾತ್ರ ಬಾಕಿ ಇದೆ. ಅಧಿಕ ಸುರಕ್ಷತೆ ಖಾತರಿಪಡಿಸುವ ನಂಬರ್‌ ಪ್ಲೇಟ್‌ ಅಳವಡಿಸುವ ಪ್ರಕ್ರಿಯೆ ಶುರುವಾಗಿ ಒಂದೂವರೆ ವರ್ಷವಾಗಿದ್ದು, ಪದೇಪದೆ ಗಡುವು ವಿಸ್ತರಣೆಯಾಗುತ್ತಾ ಬಂದಿತ್ತು. ಇನ್ನು ಸೆ.16 ಕೊನೆಯ ಗಡುವು ಎಂದು ಸರ್ಕಾರ ಹೇಳಿದೆ.
ಸೆಪ್ಟೆಂಬರ್ 15ರ ಮಧ್ಯರಾತ್ರಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಕೊಟ್ಟಿರುವ ಡೆಡ್‌ಲೈನ್ ಮುಗಿಯಲಿದೆ. ರಾಜ್ಯದಲ್ಲಿ ಒಟ್ಟಾರೆ 2 ಕೋಟಿಯಷ್ಟು ವಾಹನಗಳಿದ್ದು, ಇದರಲ್ಲಿ ಇಲ್ಲಿಯವರೆಗೆ 51 ಲಕ್ಷ ವಾಹನಗಳು ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ಅಳವಡಿಸಿಕೊಂಡಿವೆ. ಉಳಿದ 1.49 ಕೋಟಿ ವಾಹನಗಳು ಇನ್ನೂ ಎಚ್‌ಎಸ್‌ಆರ್‌ಪಿ ಹಾಕಿಸಿಲ್ಲ. ಸೆ.16ರಿಂದಲೇ ಸಾರಿಗೆ ಇಲಾಖೆ ಎಲ್ಲ ಜಿಲ್ಲೆಗಳಲ್ಲಿ 500 ರೂ. ದಂಡ ಹಾಕುವ ಪ್ರಕ್ರಿಯೆ ಪ್ರಾರಂಭಿಸಲಿದೆ. ಮೊದಲ ಸಲ 500 ರೂ., ಎರಡನೇ ಸಲಕ್ಕೆ 1,000 ರೂ. ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಹೇಳಿದೆ. ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್ ಅಳವಡಿಸದ ವಾಹನಗಳನ್ನು ಪತ್ತೆಹಚ್ಚಲು ವಿಶೇಷ ಸ್ಕ್ವಾಡ್‌ಗಳನ್ನು ರಚಿಸಿ ಅಭಿಯಾನ ನಡೆಸುವ ಚಿಂತನೆ ಇಲಾಖೆಗಿದೆ.

ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಏಕ ಮಾದರಿಯ ನಂಬರ್ ಪ್ಲೇಟ್ ಇರಬೇಕು ಮತ್ತು ಅಪರಾಧ ಕೃತ್ಯಗಳ ಬಗ್ಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ನಿಂದ ಮಾಹಿತಿ ಸಿಗಲಿದೆ ಎಂಬ ಉದ್ದೇಶದಿಂದ ಎಚ್‌ಎಸ್‌ಆರ್‌ಪಿಯನ್ನು ಜಾರಿಗೆ ತಂದಿದೆ. ಆದರೆ ಅನೇಕ ಮಂದಿ ಇನ್ನೂ ತಮ್ಮ ವಾಹನಗಳಿಗೆ ಹಾಕಿಸಿಕೊಳ್ಳದೆ ಕೊನೇ ಗಳಿಗೆಯಲ್ಲಿ ಆನ್‌ಲೈನ್‌ನಲ್ಲಿ ಬುಕ್ ಮಾಡುವುದಕ್ಕೆ ಮುಗಿಬೀಳುತ್ತಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top