ಸೋಷಿಯಲ್ ಮೀಡಿಯಾದಲ್ಲಿ ನಟನ ವಿರುದ್ಧ ಅಪಪ್ರಚಾರ
ಮಂಗಳೂರು : ತುಳು ಸಿನಿಮಾದ ಜನಪ್ರಿಯ ನಟ ದೇವದಾಸ್ ಕಾಪಿಕಾಡ್ ಬಿಜೆಪಿ ನಾಯಕರ ಜೊತೆ ಫೋಟೊ ತೆಗೆಸಿಕೊಂಡಿರುವ ವಿಚಾರ ಭಾರಿ ವಿವಾದಕ್ಕೀಡಾಗಿದೆ. ಇತ್ತೀಚೆಗೆ ಬಿಜೆಪಿಯ ಸದಸ್ಯತ್ವ ನೋಂದಣಿ ಅಭಿಯಾನದಂಗವಾಗಿ ಹಿರಿಯ ನಾಯಕರಾದ ಸದಾನಂದ ಗೌಡ, ಶಾಸಕ ವೇದವ್ಯಾಸ ಕಾಮತ್ ಸಹಿತ ಕೆಲವು ನಾಯಕರು ಅವರ ಮನೆಗೆ ಭೇಟಿ ನೀಡಿದ್ದರು. ಈ ಫೋಟೊವನ್ನು ಬಿಜೆಪಿ ತನ್ನ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡು ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದು ಹೇಳಿತ್ತು.
ಆದರೆ ಇದನ್ನು ಅಲ್ಲಗೆಳೆದಿರುವ ದೇವದಾಸ್ ಕಾಪಿಕಾಡ್, ಬಿಜೆಪಿ ನಾಯಕರು ಮನೆಗೆ ಬಂದಿದ್ದರು. ಅವರ ಜೊತೆ ಫೋಟೊ ಮಾತ್ರ ತೆಗೆಸಿಕೊಂಡಿದ್ದೇನೆ, ಪಕ್ಷದ ಸದಸ್ಯತ್ವ ಪಡೆದುಕೊಂಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಮನೆಗೆ ಬರುತ್ತೇವೆ ಎಂದು ಫೋನ್ ಮಾಡಿ ಹೇಳಿದರು. ಸೌಹಾರ್ದ ಭೇಟಗಾದರೆ ಬನ್ನೆ ಎಂದಿದ್ದೆ. ಅದೇರೀತಿ ಬಂದ ನಾಯಕರ ಜೊತೆ ಫೋಟೊ ತೆಗೆಸಿಕೊಂಡಿದ್ದೇನೆ. ಯಾರೇ ಮನೆಗೆ ಬಂದರೂ ಫೋಟೊ ತೆಗೆಸಿಕೊಳ್ಳುವುದು ನನ್ನ ಅಭ್ಯಾಸ. ನನಗೆ ಎಲ್ಲ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ. ಹೀಗಾಗಿ ಯಾವುದೇ ರಾಜಕೀಯ ಪಕ್ಷದ ಜೊತೆಗೆ ಗುರುತಿಸಿಕೊಳ್ಳಲು ಬಯಸುವುದಿಲ್ಲ ಎಂದಿದ್ದಾರೆ. ಇದರ ಹೊರತಾಗಿಯೂ ಕೆಲವು ಸ್ಥಾಪಿತ ಹಿತಾಸಕ್ತಿಗಳು ಅವರ ವಿರುದ್ಧ ಅಪಪ್ರಚಾರ ಮಾಡುತ್ತಿವೆ.
ಈ ಬೆಳವಣಿಗೆ ಬೆನ್ನಲ್ಲೇ ಸೌದಿ ಅರೇಬಿಯಾದಲ್ಲಿ ನಡೆಯಬೇಕಿದ್ದ ಇವರ ಕಾಮಿಡಿ ಶೋಗೆ ಬಹಿಷ್ಕಾರದ ಬೆದರಿಕೆ ಬಂದಿದೆ. ದೇವದಾಸ್ ಸಂಘಿ, ಬಿಜೆಪಿ ಕೂಟಕ್ಕೆ ಸೇರಿದವರು ಎಂದೆಲ್ಲ ಕೆಲವು ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಂ ಪೇಜ್ಗಳಲ್ಲಿ ಅಪಪ್ರಚಾರ ನಡೆಯುತ್ತಿದೆ. ತುಳುವಿನಲ್ಲಿ ದೇವದಾಸ್ ಕಾಪಿಕಾಡ್ ದೊಡ್ಡ ಹೆಸರು ಮಾಡಿದ್ದಾರೆ. ಅವರು ಕಲಾವಿದನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ರಂಗಭೂಮಿಯಲ್ಲೂ ಅವರು ಆ್ಯಕ್ಟೀವ್ ಆಗಿದ್ದಾರೆ.
ಸೆ.13 ಹಾಗೂ 14ರಂದು ಸೌದಿಯ ಜುಬೈಲ್ನ ಪುಲಿ ರೆಸ್ಟೋರೆಂಟ್ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ‘ಬಿಜೆಪಿ ಸದಸ್ಯತ್ವ ಪಡೆದ ಹಿನ್ನೆಲೆ ಕಾರ್ಯಕ್ರಮ ಬಹಿಷ್ಕರಿಸಿ’ ಎಂಬ ಪೋಸ್ಟ್ ವೈರಲ್ ಆಗಿದೆ. ದುಬೈ ಆಯೋಜಕರನ್ನು ಇಲ್ಲಿನ ಕೆಲವರು ಸಂಪರ್ಕಿಸಿ ಯಾವುದೇ ಕಾರಣಕ್ಕೂ ದೇವದಾಸ್ ಕಾಪಿಕಾಡ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂದು ಒತ್ತಡ ಹೇರಿದ್ದಾರೆ ಎನ್ನಲಾಗಿದೆ.