ಸರಕಾರದ ಕ್ರಮಕ್ಕೆ ಭಾರಿ ಆಕ್ರೋಶ
ಉಡುಪಿ: ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಘೋಷಿಸಿದ್ದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಯನ್ನು ಕೊನೇ ಕ್ಷಣದಲ್ಲಿ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಒತ್ತಡಕ್ಕೆ ಮಣಿದು ತಡೆಹಿಡಿದಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಶಿಕ್ಷಕರ ದಿನಾಚರಣೆ ಹಿನ್ನೆಲೆ ವಿವಿಧ ಶಿಕ್ಷಕರಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ ಅವರೂ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಆದರೆ ಕೊನೇ ಕ್ಷಣದಲ್ಲಿ ಸರಕಾರ ಅವರ ಪ್ರಶಸ್ತಿಯನ್ನು ತಡೆಹಿಡಿದಿದೆ.
ಇದಕ್ಕೆ ಕಾರಣ ಎರಡು ವರ್ಷ ಹಿಂದೆ ನಡೆದಿದ್ದ ಹಿಜಾಬ್ ವಿವಾದ ಎನ್ನುವುದು ಬಹಿರಂಗವಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ್ದ ಸಂದರ್ಭದಲ್ಲಿ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ ಅವರೂ ಸುದ್ದಿಯಾಗಿದ್ದರು. ಹಿಜಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಕಾಲೇಜು ಗೇಟ್ ಬಳಿ ತಡೆದು ನಿಲ್ಲಿಸಿದ್ದರು. ಆ ಫೋಟೊ ವೈರಲ್ ಬಹಳ ಆಗಿತ್ತು. ಈ ಹಿನ್ನೆಲೆಯಲ್ಲಿ ರಾಮಕೃಷ್ಣ ಬಿ.ಜಿ. ಅವರಿಗೆ ಘೋಷಿಸಿದ ಪ್ರಶಸ್ತಿ ಹಿಂಪಡೆಯಲು ಕೆಲವರು ಸರಕಾರದ ಮೇಲೆ ಬಹಳ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.